
ನಾನು ನನ್ನ ರಾಜಕೀಯ ವೃತ್ತಿಜೀವನವನ್ನು 1994 ರಲ್ಲಿ ಪ್ರಾರಂಭಿಸಿದೆ. ಅಂದಿನಿಂದ ಇಂದಿನವರೆಗೂ ನಾನು ಎಂದಿಗು ಭದ್ರತೆಯನ್ನು ತೆಗೆದುಕೊಂಡಿಲ್ಲ. ಇನ್ನು ಮುಂದೆಯೂ ನಾನು ಭದ್ರತೆ ತೆಗೆದುಕೊಳ್ಳುವುದಿಲ್ಲ. ನನ್ನ ಜೀವವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಗುರುವಾರ, ಅಸಾದುದ್ದೀನ್ ಓವೈಸಿ ಅವರು ಮೀರತ್‌ನ ಕಿಥೌರ್‌ನಲ್ಲಿ ಚುನಾವಣಾ ಸಂಬಂಧಿತ ಕಾರ್ಯಕ್ರಮ ಮುಗಿಸಿ ದೆಹಲಿಗೆ ಹಿಂದಿರುಗುತ್ತಿದ್ದಾಗ ಗುಂಡಿನ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಸಮಗ್ರ ತನಿಖೆಗಾಗಿ ಉತ್ತರ ಪ್ರದೇಶ ಪೊಲೀಸರು ಐದು ತಂಡಗಳನ್ನು ರಚಿಸಿ, ತ್ವರಿತ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬೊಮ್ಮಾಯಿ 6 ತಿಂಗಳ ಸಿಎಂ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಬಿ.ಸಿ. ಪಾಟೀಲ್ ತಿರುಗೇಟು
ದಾಳಿಯ ಹಿಂದೆ ಮಾಸ್ಟರ್ ಮೈಂಡ್ ?
ಇಂದು, ಇಂಡಿಯಾ ಟುಡೇ ಜೊತೆ ಮಾತನಾಡಿರುವ ಅಸಾದುದ್ದೀನ್ ಓವೈಸಿ, ದಾಳಿಯ ಹಿಂದೆ ‘ಮಾಸ್ಟರ್ ಮೈಂಡ್’ ಒಬ್ಬರಿದ್ದಾರೆಂದು ಆರೋಪಿಸಿದ್ದಾರೆ. ಈ ದಾಳಿಯ ಹಿಂದೆ ಖಂಡಿತವಾಗಿಯೂ ಯಾರೋ ಮಾಸ್ಟರ್ ಮೈಂಡ್ ಇದ್ದಾರೆ, ಈ ಬಗ್ಗೆ ನಾನು ಚುನಾವಣಾ ಆಯೋಗಕ್ಕೆ ಹೇಳಬಯಸುತ್ತೇನೆ. ಕೆಲವು ದಿನಗಳ ಹಿಂದೆ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ, ನನ್ನ ಪ್ರಾಣ ತೆಗೆಯುವ ಮಾತು ನಡೆದಿತ್ತು. ಇದು ದಾಖಲೆಯಲ್ಲಿದೆ, ಅದನ್ನು ನೋಡಬೇಕೆಂದು ಓವೈಸಿ ಹೇಳಿದ್ದಾರೆ.
ಘಟನೆ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ಅವರು, ಇಬ್ಬರು ದಾಳಿಕೋರರು ಕೆಂಪು ಮತ್ತು ಬಿಳಿ ಜಾಕೆಟ್‌ಗಳನ್ನು ಧರಿಸಿದ್ದರು. ಅವರು ಬಳಸಿದ ಬಂದೂಕಿನ ಶಬ್ದವನ್ನು ಕೇಳಿದರೆ, ಅದು ದೇಶ-ನಿರ್ಮಿತ ಗನ್ ಅಲ್ಲ, ಆದರೆ 9 ಎಂಎಂ ಪಿಸ್ತೂಲ್ ಇರಬಹುದು ಎಂದೆನಿಸುತ್ತಿದೆ. ಇಂತಹವರಿಗೆ ಭಾರತದಲ್ಲಿ ಮುಕ್ತ ಹಸ್ತವಿದೆ. ಇದು ಗಂಭೀರ ವಿಷಯ, ಪ್ರಧಾನಿ ಮತ್ತು ಉತ್ತರ ಪ್ರದೇಶದ ಆಡಳಿತವು ಈ ಬಗ್ಗೆ ಪರಿಶೀಲಿಸಿ ತನಿಖೆ ನಡೆಸಬೇಕು. ಅವಕಾಶ ಸಿಕ್ಕರೆ ನಾನು ಈ ಬಗ್ಗೆ ಲೋಕಸಭೆ ಸ್ಪೀಕರ್ ಅವರೊಂದಿಗೆ ಮಾತನಾಡುತ್ತೇನೆ. ಇಂದು ನಾಲ್ಕು ಬಾರಿ ಸಂಸದನಾಗಿರುವ ನನ್ನ ಮೇಲೆ ಗುಂಡು ಹಾರಿಸಲಾಗಿದೆ, ನಾಳೆ ಅದು ಬೇರೆಯವರಾಗಿರಬಹುದು ಎಂದು ಓವೈಸಿ ಹೇಳಿದ್ದಾರೆ.