ಪಂಜಾಬ್: ಚುನಾವಣೆಯಲ್ಲಿ ಸ್ಪರ್ಧಿಸಲು ವಯಸ್ಸು, ಬಡತನ ಅಡ್ಡಿಯಾಗುವುದಿಲ್ಲ ಅನ್ನೋದನ್ನು ಇಲ್ಲೊಬ್ಬರು ಸಾಧಿಸಿದ್ದಾರೆ. ಪಂಜಾಬ್ ನ ಹೋಶಿಯಾರ್‌ಪುರದಲ್ಲಿ 80 ವರ್ಷ ವಯಸ್ಸಿನ ಓಂ ಪ್ರಕಾಶ್ ಜಖು, ಫೆಬ್ರವರಿ 20ರಂದು ನಡೆಯಲಿರುವ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಾಗಿದ್ದಾರೆ.
ಹೋಶಿಯಾರ್‌ಪುರ ಗಡಿಯಾರ ಗೋಪುರದ ಸಮೀಪವಿರುವ ಒಂದು ಸಣ್ಣ ಅಂಗಡಿಯಲ್ಲಿ ಜೀವನೋಪಾಯಕ್ಕಾಗಿ ಶೂಗಳನ್ನು ಸರಿಪಡಿಸುವ ಮತ್ತು ಸ್ವಚ್ಛಗೊಳಿಸುವ ಓಂ ಪ್ರಕಾಶ್ ಜಖು ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದಾರೆ. ಅವರು ಭಾರತ ರಾಷ್ಟ್ರ ಡೆಮಾಕ್ರಟಿಕ್ ಪಾರ್ಟಿಯಿಂದ ಹೋಶಿಯಾರ್‌ಪುರದಿಂದ 20ನೇ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಈ ಕ್ಷೇತ್ರದಿಂದ ಕಣದಲ್ಲಿರುವ ಇತರ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಸುಂದರ್ ಶಾಮ್ ಅರೋರಾ, ಬಿಜೆಪಿಯ ತಿಕ್ಷನ್ ಸುದ್ ಮತ್ತು ಎಎಪಿಯ ಬ್ರಮ್ ಶಂಕರ್ ಸೇರಿದ್ದಾರೆ. ಇನ್ನೂ ಚುನಾವಣಾ ಯಶಸ್ಸಿನ ರುಚಿ ನೋಡದಿದ್ದರೂ ತಾನು 20ನೇ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಎಂದು ಜಖು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಜಖು ಪತ್ನಿ ಭಜನ್ ಕೌರ್ (75) ಮತ್ತು ಅವರ ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸುವ ಅವರ ನಿರ್ಧಾರವನ್ನು ಬೆಂಬಲಿಸುತ್ತಾರಂತೆ. ಜಖು, ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲು ಪಾಲಾಗಿದ್ದರು. ಅಂದಹಾಗೆ, ಒಂದು ಕಾಲದಲ್ಲಿ ಅವರು ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್‌ಗೆ ತುಂಬಾ ಹತ್ತಿರವಾಗಿದ್ದರು. ಅವರು ಹೋಶಿಯಾರ್‌ಪುರದಲ್ಲಿದ್ದಾಗ ಅವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರಂತೆ.
ಒಂದು ವೇಳೆ ಜಖು ಅವರು ಚುನಾಯಿತರಾದರೆ, 18 ವರ್ಷದವರೆಗೆ ಎಲ್ಲರಿಗೂ ಉಚಿತ ಶಿಕ್ಷಣ, ಉತ್ತಮ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳಿಗಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಯುವಜನತೆಯನ್ನು ಮಾದಕ ವಸ್ತುಗಳಿಂದ ರಕ್ಷಿಸಬೇಕಾಗಿದೆ ಎಂದು ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದಾರೆ.