ಆಸನ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಉಂಟಾದ ವಿಳಂಬದಿಂದಾಗಿ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮಂದ ಬೆಳಕಿನಲ್ಲಿ ಪರೀಕ್ಷೆಯನ್ನು ನಡೆಸಿದ ಘಟನೆಯು ಮೋತಿಹಾರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ನಡೆದಿದೆ.
ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆಯೇ ಇಲ್ಲದ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ಬಾಲ್ಕನಿಯಲ್ಲಿ ಕುಳಿತು ಪರೀಕ್ಷೆ ಬರೆದಿದ್ದಾರೆ. ಅಲ್ಲದೇ ಕಾಲೇಜು ಪಾರ್ಕಿಂಗ್ನಲ್ಲಿ ನಿಲ್ಲಿಸಲಾದ ಕಾರುಗಳ ಹೆಡ್ಲೈಟ್ಗಳ ಬೆಳಕಿನ ಅಡಿಯಲ್ಲಿ ಕುಳಿತು ಪರೀಕ್ಷೆ ಬರೆಯುವಂತಹ ಪರಿಸ್ಥಿತಿ ಎದುರಾಗಿತ್ತು.
ಮಹಾರಾಜ್ ಹರೇಂದ್ರ ಕಿಶೋರ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಜಿಲ್ಲಾಡಳಿತವು ಕೇಂದ್ರದ ಅಧೀಕ್ಷಕರನ್ನು ಕೆಲಸದಿಂದ ತೆಗೆದು ಹಾಕಿದ್ದು ಪರೀಕ್ಷೆಯ ವೇಳೆಯಲ್ಲಿ ಉಂಟಾದ ಲೋಪದ ಬಗ್ಗೆ ತನಿಖೆಗೆ ಆದೇಶಿಸಿದೆ.
ಬಿಹಾರದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಲು ಆರಂಭವಾಗುತ್ತಿದ್ದಂತೆಯೇ ಬಿಹಾರ ಶಾಲಾ ಪರೀಕ್ಷಾ ಮಂಡಳಿಯು 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದೆ.
ಮಧ್ಯಾಹ್ನ 1:45ಕ್ಕೆ ಆರಂಭವಾಗಿ ಸಂಜೆ 5ಕ್ಕೆ ಮುಗಿಯಬೇಕಿದ್ದ ಪರೀಕ್ಷೆಯು ಸಂಜೆ 4:30ಕ್ಕೆ ಆರಂಭವಾಯಿತು ಎಂದು ಮೋತಿಹಾರಿ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಆಡಳಿತದ ಸಹಾಯದಿಂದ ಚಟೌನಿ ಪೊಲೀಸ್ ಠಾಣೆಯು ಪರೀಕ್ಷಾರ್ಥಿಗಳಿಗೆ ಬೆಳಕನ್ನು ಒದಗಿಸಲು ಜನರೇಟರ್ಗಳನ್ನು ತಕ್ಷಣವೇ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಮಕ್ಕಳು ವಾಹನಗಳ ಹೆಡ್ಲೈಟ್ ಬೆಳಕಿನಲ್ಲಿ ಪರೀಕ್ಷೆಗಳನ್ನು ಬರೆದಿದ್ದಾರೆ .