ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಮುಖಿಯಾಗಿ ಸಾಮಾನ್ಯ ಜನರ ಜೇಬನ್ನು ಸುಡುತ್ತಿರುವಾಗ ಮಧ್ಯಮ ವರ್ಗದವರು, ನಿತ್ಯ 10-20 ಕಿ.ಮೀ. ದ್ವಿಚಕ್ರಗಳಲ್ಲಿ ಸಂಚರಿಸುವವರು ಪೆಟ್ರೋಲ್‌ಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೊರೆಹೋಗುತ್ತಿದ್ದಾರೆ. ಇದು ಅನಿವಾರ್ಯತೆಯಿಂದ ಇಡಲಾಗುತ್ತಿರುವ ಹೆಜ್ಜೆ. ಹಾಗಂತ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಸುಮಾರು 1 ಲಕ್ಷ ರೂ. ಗಿಂತ ಕಡಿಮೆ ಏನಿಲ್ಲ. ಜತೆಗೆ ಪ್ರತಿ 2-3 ವರ್ಷಕ್ಕೆ ಬ್ಯಾಟರಿ ಬದಲಾವಣೆ ಮಾಡಬೇಕು. ಅದಕ್ಕೆ 25-30 ಸಾವಿರ ರೂ. ಕೊಡಬೇಕು..!
ಹಾಗಾಗಿ, ಬಹಳಷ್ಟು ಜನರು ಸಾಲ ಮಾಡಿಯಾದರೂ ಸರಿಯೇ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿಬಿಡೋಣ ಎಂಬ ಆಲೋಚನೆಗೆ ಇಳಿದಿದ್ದಾರೆ. ಅಂತಹವರಿಗೆ ಕುಟುಂಬ ಸಮೇತರಾಗಿ ಆರಾಮಾಗಿ ಎಲ್ಲಿಬೇಕಾದರೂ ಸಂಚರಿಸಲು ಇರುವ ಆಯ್ಕೆ ಎಂದರೆ ’’ ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿ ಮಾದರಿ ಕಾರು’’. ಈ ಶ್ರೇಣಿಯ ಪೈಕಿ ಅತ್ಯಂತ ವಿಶ್ವಾಸಾರ್ಹ ಮತ್ತು ಜನಪ್ರಿಯ ಎಂದರೆ, ಅದು ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಕಾರು.
‘ಟಾಟಾ ನೆಕ್ಸಾನ್ ಸಿಎನ್‌ಜಿ’ ಬಗ್ಗೆ ಇಲ್ಲಿದೆ ವಿವರ
ಈ ಕಾರಿಗೆ ಮಹಾರಾಷ್ಟ್ರದಲ್ಲಿ 2.5 ಲಕ್ಷ ರೂ.ವರೆಗೆ ಸಹಾಯ ಧನ ಕೂಡ ನೀಡಲಾಗುತ್ತಿದೆ. ಈ ರಾಜ್ಯದಲ್ಲೇ ಅತಿಹೆಚ್ಚು ’’ನೆಕ್ಸಾನ್ ಇವಿ’’ ಮಾಡೆಲ್ ಕಾರುಗಳ ಬುಕ್ಕಿಂಗ್ ಆಗಿದೆ. ಹಾಗಾಗಿ ಬುಕ್ಕಿಂಗ್ ಕಾಯುವಿಕೆ ಅವಧಿಯು 6 ತಿಂಗಳವರೆಗೆ ವಿಸ್ತರಣೆಗೊಂಡಿದೆ.
ಒಂದು ಬಾರಿ ಪೂರ್ತಿ ಬ್ಯಾಟರಿ ಚಾರ್ಜ್ ಮಾಡಿದರೆ 312 ಕಿ.ಮೀ. ವರೆಗೆ ಸಂಚರಿಸಬಹುದಾಗಿದೆ ಎಂದು ಕಂಪನಿ ಘೋಷಿಸಿಕೊಂಡಿದೆ. ಆದರೆ, ಕಾರು ಮಾಲೀಕರ ಪ್ರಕಾರ ಒಂದು ಬಾರಿಯ ಪೂರ್ಣ ಚಾರ್ಜ್‌ಗೆ ಸಿಗುವುದು 220 ಕಿ.ಮೀ. ಮಾತ್ರವೇ ಸರಿ.
ಅಲ್ಲದೇ, ಈ ಕಾರಿನ ಬೆಲೆಯೇನೂ ಕಡಿಮೆ ಇಲ್ಲ. ದೇಶೀಯ ಉತ್ಪಾದನೆ ಕಾರು ಆಗಿರುವ ಕಾರಣ ತನ್ನ ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಕಾರು ಕಂಪನಿಗಳ ಮಾಡೆಲ್‌ಗಳಿಗಿಂತ ಕಡಿಮೆ ಬೆಲೆಗೆ ನೆಕ್ಸಾನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. 14-17 ಲಕ್ಷ ರೂ.ಗೆ ನೆಕ್ಸಾನ್ ಇವಿ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.