ಹಣ ವರ್ಗಾವಣೆ ಮಾಡುವ ವಿಧಾನಗಳಿಗೆ ಅನ್ವಯವಾಗುವ ಕೆಲವು ನಿಯಮಗಳನ್ನು ಎಸ್‌ಬಿಐ ಬದಲಾವಣೆ ಮಾಡಿದೆ. 2022ರ ಫೆಬ್ರವರಿ 1 ರಿಂದ ಇದು ಜಾರಿಗೆ ಬಂದಿದೆ. ತ್ವರಿತ ಪಾವತಿ ಸೇವೆ (ಐಎಂಪಿಎಸ್)ಗೆ ಹೊಸ ಶುಲ್ಕಗಳು ಅನ್ವಯವಾಗುವಂತೆ ಸ್ಲ್ಯಾಬ್ ಬದಲಾವಣೆ ಮಾಡಲಾಗಿದೆ. ಹೊಸ ಸ್ಲ್ಯಾಬ್‍ಗಳನ್ನು ಪರಿಚಯಿಸಲಾಗಿದೆ.
ಗರಿಷ್ಠ ಮೊತ್ತವಾಗಿ ಇದುವರೆಗೂ 2 ಲಕ್ಷ ರೂ. ಮಾತ್ರವೇ ಐಎಂಪಿಎಸ್ ಮೂಲಕ ವರ್ಗಾವಣೆಗೆ ಅವಕಾಶವಿತ್ತು. ಆದರೆ, ಈ ಮೊತ್ತವು ಸದ್ಯ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಡಿಜಿಟಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಜನರು ಹೆಚ್ಚೆಚ್ಚು ಬಳಸುವ ಮೂಲಕ ದೇಶದಲ್ಲಿ ನಡೆಯುವ ಹಣದ ವಹಿವಾಟುಗಳು ಪಾರದರ್ಶಕವಾಗಿರಲಿ ಎಂಬ ಉದ್ದೇಶದಿಂದ ಐಎಂಪಿಎಸ್ ಮೂಲಕ ವರ್ಗಾವಣೆ ಮಾಡಲಾಗುವ ಮೊತ್ತದ ಗರಿಷ್ಠ ಮೊತ್ತ ಹೆಚ್ಚಿಸಲಾಗಿದೆ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಸ್ಲ್ಯಾಬ್‍ಗಳ ಪ್ರಕಾರ, 1000 ರೂ.ವರೆಗೆ ವರ್ಗಾವಣೆಗೆ ಶುಲ್ಕವಿಲ್ಲ. 1000 ರೂ.ನಿಂದ 10 ಸಾವಿರ ರೂ.ವರೆಗೆ ಪ್ರತಿ ಸೇವೆಗೆ 2 ರೂ. ಜತೆಗೆ ಜಿಎಸ್‌ಟಿ ಸೇರಿಸಿ ಶುಲ್ಕ ಅನ್ವಯವಾಗಲಿದೆ.
10 ಸಾವಿರದಿಂದ 1 ಲಕ್ಷ ರೂ.ವರೆಗೆ 4 ರೂ. ಸೇವಾ ಶುಲ್ಕದ ಜತೆಗೆ ಜಿಎಸ್‌ಟಿ ಅನ್ವಯ.
1 ಲಕ್ಷ ರೂ.ನಿಂದ 2 ಲಕ್ಷ ರೂ.ವರೆಗೆ 12 ರೂ. ಸೇವಾ ಶುಲ್ಕದ ಜೊತೆಗೆ ಜಿಎಸ್‌ಟಿ ಮತ್ತು 2 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ 20 ರೂ. ಸೇವಾಶುಲ್ಕದ ಜತೆಗೆ ಜಿಎಸ್‌ಟಿ ಅನ್ವಯಿಸಲಿದೆ ಎಂದು ಬ್ಯಾಂಕ್ ಹೇಳಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ರಿಸರ್ವ್ ಬ್ಯಾಂಕ್ ಹಣಕಾಸು ಸಮಿತಿ ನೀತಿ ರಚನೆ ಸಭೆಯಲ್ಲಿ ಐಎಂಪಿಎಸ್ ಗರಿಷ್ಠ ಮೊತ್ತ ಹೆಚ್ಚಿಸುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿತ್ತು.