ಬಳ್ಳಾರಿ: ಸ್ವಪಕ್ಷೀಯ ಸಚಿವರ ವಿರುದ್ಧವೇ ಶಾಸಕ ಸೋಮಶೇಖರ್ ರೆಡ್ಡಿ ಕೆಂಡಾ ಮಂಡಲವಾದ ಘಟನೆ ನಡೆದಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ದುರಹಂಕಾರ ಹೆಚ್ಚಾಗಿದೆ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ ರೆಡ್ಡಿ, ಕೆಲ ಸಚಿವರು ದೇವಲೋಕದಿಂದ ಬಂದವರಂತೆ ಆಡುತ್ತಿದ್ದಾರೆ. ಸಚಿವ ಸುಧಾಕರ್ ಏನು ಮೇಲಿಂದ ಬಂದವರಾ? ಶಾಸಕರು ಕರೆ ಮಾಡಿದರೆ ಕರೆ ಸ್ವೀಕರಿಸಲ್ಲ, ಮೆಸೇಜ್ ಹಾಕಿದರೂ ಪ್ರತಿಕ್ರಿಯೆ ಇಲ್ಲ. ನಮಗೆ ಹೀಗೆ ನಡೆದುಕೊಂಡರೆ ಇನ್ನು ಜನಸಾಮಾನ್ಯರ ಸ್ಥಿತಿ ಏನು? ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿತ್ತು. ಏಕಾಏಕಿ ಸೀಟ್ ಕಡಿತ ಮಾಡಲಾಗಿತ್ತು. ಈ ಬಗ್ಗೆ ನಾನು ಸಚಿವ ಸುಧಾಕರ್ ಅವರಿಗೆ ಕರೆ ಮಾಡಿದೆ, ಅವರ ಪಿಎಗೂ ಕರೆ ಮಾಡಿದೆ. ಮೆಸೇಜ್ ಕೂಡ ಹಾಕಿದ್ದೇನೆ ಯಾವುದಕ್ಕೂ ಪ್ರತಿಕ್ರಿಯೆ ಇಲ್ಲ. ಸಚಿವರು ಸಿಎಂಗಿಂತ ದೊಡ್ಡವರಾ? ಅಥವಾ ದೇವಲೋಕದಿಂದ ಬಂದಿದ್ದಾರಾ? ಅದಕ್ಕೆ ನೇರವಾಗಿ ಸಿಎಂ ಬಳಿ ಹೋಗಿ ಹೇಳಿದೆ. 30 ಸೆಕೆಂಡ್ ನಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿದರು ಎಂದರು.
ಸಚಿವ ಸುಧಾಕರ್ ಅವರ ದುರಹಂಕಾರ ಹೆಚ್ಚಾಗಿದೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಲು ಕರೆ ಮಾಡಿದರೂ ಸಚಿವರು ಕರೆ ಸ್ವೀಕರಿಸದೇ ಅಹಂಕಾರ ಮಾಡಿದ್ದಾರೆ. ನಮ್ಮಂತವರಿಗೆ ಹೀಗಾದರೆ ಜನರ ಸ್ಥಿತಿಯೇನು ಯೋಚಿಸಿ ಎಂದು ವಾಗ್ದಾಳಿ ನಡೆಸಿದರು.