ಕೊಪ್ಪಳ: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಅಧಿಕಾರಾವಧಿ ಇರುವುದು 6 ತಿಂಗಳು. ಸಿಎಂ ಬೊಮ್ಮಾಯಿ ಅವರಿಗೆ 6 ತಿಂಗಳು ಅವಕಾಶ ಮಾತ್ರ ಕೊಟ್ಟಿದ್ದು ಎಂಬ ಬಗ್ಗೆ ನಮಗೆ ಮಾಹಿತಿ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ನಮಗೆ ಬಂದ ಮಾಹಿತಿ ಪ್ರಕಾರ ಕರ್ನಾಟಕ ಸರ್ಕಾರದಲ್ಲಿ ಈ ಬಾರಿಯೂ ಮೂವರು ಸಿಎಂ ಆಗಲಿದ್ದಾರೆ. ಬೊಮ್ಮಾಯಿ ಅವರಿಗೆ 6 ತಿಂಗಳ ಅವಕಾಶ ಕೊಟ್ಟಿದ್ದರು. ಸಿಎಂ ಮಾಡುವಾಗಲೇ 6 ತಿಂಗಳು ಎಂದಿದ್ದಾರೆ. ಪ್ರಮಾಣವಚನಕ್ಕೂ ಷರತ್ತು ಹಾಕಿದ್ದರು ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಲ್ಲಿ ನನ್ನನ್ನು ಬಿಟ್ಟು ಇನ್ನು 4-5 ಜನರಿಗೆ ಮಾತ್ರ ಸಿಎಂ ಆಗುವ ಸಾಮರ್ಥ್ಯವಿದೆ. ನಮ್ಮಲ್ಲಿ ಯಾವುದೇ ಬಣ ರಾಜಕೀಯವೂ ಇಲ್ಲ ಎಂದಿದ್ದಾರೆ.
ಸಚಿವ ಶ್ರೀರಾಮುಲು ಅವರಿಗೆ ಡಿಸಿಎಂ ಹುದ್ದೆ ವಿಚಾರವಾಗಿ, ಡಿಸಿಎಂ ಆದ್ರೂ ಕೆಲಸ ಮಾಡಬಹುದು. ಡಿಸಿಎಂ ಹುದ್ದೆ ಇಲ್ಲಾ ಅಂದ್ರು ಕೆಲಸ ಮಾಡಬಹುದು. ನಮ್ಮ ಸಮುದಾಯಕ್ಕೆ 7.5ರಷ್ಟು ಮೀಸಲಾತಿ ಕೊಡ್ತೀವಿ ಎಂದು ಮಾತುಕೊಟ್ಟರು. ಬಿಜೆಪಿ ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ಮೀಸಲಾತಿ ಎಂದು ಘೋಷಿಸಿದರು. ಈಗ 24 ತಿಂಗಳು ಕಳೆದರೂ ಮೀಸಲಾತಿ ವಿಚಾರ ಬರುತ್ತಿಲ್ಲ. ಇದೆಲ್ಲ ಅಧಿಕಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.