ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕೆಂಬ ಒತ್ತಡಕ್ಕೆ ಸಿಲುಕಿರುವ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದೆ. ಹಾಲಿ ಬಹುತೇಕ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರಪ್ರದೇಶ ವಿಧಾನಸಭಾ ಸ್ಪೀಕರ್ ಹೃದಯ ನಾರಾಯಣ ದೀಕ್ಷಿತ್ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಅವರಿಗೆ ಈಗಾಗಲೇ 75 ವರ್ಷ ದಾಟಿರುವ ಕಾರಣ ಬಿಜೆಪಿ ಹೈಕಮಾಂಡ್ ಈ ತೀರ್ಮಾನ ಕೈಗೊಂಡಿದ್ದು, ಕಡೆಪಕ್ಷ ತಮ್ಮ ಮಗನಿಗಾದರೂ ಭಗವಂತ್ ನಗರ ಕ್ಷೇತ್ರದಿಂದ ಟಿಕೆಟ್ ಕೊಡಿಸಬೇಕೆಂಬ ಪ್ರಯತ್ನದಲ್ಲಿದ್ದ ಹೃದಯ ನಾರಾಯಣ್ ದೀಕ್ಷಿತ್ ಅವರಿಗೆ ಅಲ್ಲಿಯೂ ನಿರಾಸೆಯಾಗಿದೆ.
ಮೋದಿಯವರ ರೂಪದಲ್ಲಿ ಸ್ವಾಮಿ ವಿವೇಕಾನಂದರ ಪುನರ್ಜನ್ಮವಾಗಿದೆ: ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ
ಭಗವಂತ್ ನಗರ ಕ್ಷೇತ್ರದ ಟಿಕೆಟ್ ಅನ್ನು ಅಶುತೋಷ್ ಶುಕ್ಲಾ ಅವರಿಗೆ ನೀಡಲಾಗಿದ್ದು, ಇನ್ನು ಕಾನೂನು ಸಚಿವ ಬ್ರಿಜೇಶ್ ಪಾಠಕ್ ಅವರಿಗೆ ಲಕ್ನೋ ಕೇಂದ್ರ ಕ್ಷೇತ್ರದ ಬದಲಿಗೆ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಇನ್ನು ಲಕ್ನೋ ಕೇಂದ್ರ ಕ್ಷೇತ್ರದಿಂದ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರಿಗೆ ಟಿಕೆಟ್ ನೀಡಬಹುದೆಂದು ಹೇಳಲಾಗಿತ್ತಾದರೂ ಅಲ್ಲಿಂದ ರಜನೀಶ್ ಗುಪ್ತಾ ಅವರನ್ನು ಕಣಕ್ಕಿಳಿಸಲಾಗಿದೆ. ಹೀಗಾಗಿ ಅಪರ್ಣಾ ಯಾದವರಿಗೆ ಯಾವ ಕ್ಷೇತ್ರದಿಂದ ಕಣಕ್ಕಿಳಿಸಬಹುದು ಎಂಬ ಕುತೂಹಲ ಮೂಡಿದೆ.