
ಅಂಬುಲೆನ್ಸ್ ನಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗುವಾಗ ಅದರಲ್ಲಿರುವ ಸಂಬಂಧಿಕರಿಗೆ ಎಷ್ಟು ಧಾವಂತ ಇರುತ್ತದೆ ಎಂಬುದು ಬಲ್ಲವರಿಗೇ ಗೊತ್ತು. ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿ ತಮ್ಮವರ ಪ್ರಾಣ ಕಾಪಾಡಿಕೊಳ್ಳುವ ಒತ್ತಡದಲ್ಲಿ ರೋಗಿಗಳ ಸಂಬಂಧಿಕರಿರುತ್ತಾರೆ. ಇಂತಹ ಸಂದರ್ಭದಲ್ಲಿ ಟ್ರಾಫಿಕ್ ನಿಂದ ಅಥವಾ ಅಂಬುಲೆನ್ಸ್ ಹಾಳಾದರೆ ರೋಗಿಗಳ ಸಂಬಂಧಿಕರಿಗೆ ಜೀವವೇ ಬಾಯಿಗೆ ಬಂದಂತಾಗಿರುತ್ತದೆ.
ಇಂತಹ ಒಂದು ಪ್ರಕರಣದಲ್ಲಿ ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಕರೆದೊಯ್ಯುತ್ತಿದ್ದ ಅಂಬುಲೆನ್ಸ್ ಮಧ್ಯದಲ್ಲೇ ಟೈರ್ ಪಂಕ್ಚರ್ ಆಗಿ ನಿಂತಿದೆ. ಆಗ ದೇವರಂತೆ ರೋಗಿಗಳ ಸಂಬಂಧಿಕರ ನೆರವಿಗೆ ಬಂದ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಅಂಬುಲೆನ್ಸ್ ಚಾಲಕನೊಂದಿಗೆ ಸೇರಿ ತಕ್ಷಣವೇ ಟೈರ್ ಬದಲಿಸಿ ಅಂಬುಲೆನ್ಸ್ ಮುಂದೆ ಸಾಗಲು ಅನುವು ಮಾಡಿಕೊಟ್ಟ ಮಾನವೀಯ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಅಂಬುಲೆನ್ಸ್ ವಿಧಾನಸೌಧದ ಸಿಐಡಿ ಕಛೇರಿ ಬಳಿ ಪಂಕ್ಚರ್ ಆಗಿದೆ. ಅಂಬುಲೆನ್ಸ್ ನಲ್ಲಿದ್ದ ರೋಗಿ ಸಂಬಂಧಿಕರು ಮತ್ತೊಂದು ಅಂಬುಲೆನ್ಸ್ ಗಾಗಿ ಸತತ ಕರೆ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗೆ ಸುಮಾರು ಒಂದು ಗಂಟೆಗಳ ಕಾಲ ಅವರುಗಳು ನಿರಂತರ ಪ್ರಯತ್ನ ನಡೆಸಿದ್ದು, ಯಾವುದೇ ಪ್ರಯೋಜನವಾಗಲಿಲ್ಲ.
ಆಗ ಅವರ ಪಾಲಿಗೆ ದೇವರಂತೆ ಒದಗಿ ಬಂದವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಸಿಬ್ಬಂದಿ ಕಾಸಪ್ಪ ಕಲ್ಲೂರ. ತಾವೇ ಟೈರ್ ಬದಲಿಸಲು ಮುಂದಾದ ಕಾಸಪ್ಪ ಕಲ್ಲೂರ ಅದನ್ನು ಮಾಡಿಕೊಡುವ ಮೂಲಕ ಅಂಬುಲೆನ್ಸ್ ಮುಂದೆ ಸಾಗಲು ಅನುವು ಮಾಡಿಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಲಿ ವೈರಲ್ ಆಗಿದ್ದು, ಪೇದೆ ಕಾಸಪ್ಪ ಕಲ್ಲೂರ ಅವರ ಮಾನವೀಯ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
https://youtu.be/-H50crOq76U