ಪಂಚರಾಜ್ಯಗಳ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಏರಿಕೆಯಾಗತೊಡಗಿದ್ದು, ಎಲ್ಲ ಪಕ್ಷಗಳು ಗೆಲುವಿಗಾಗಿ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ ಸಮಾರಂಭ ಆಯೋಜಿಸಲು ನಿರ್ಬಂಧಗಳಿದ್ದು, ಇದೀಗ ಕೆಲವೊಂದು ನಿಯಮಾವಳಿಗಳೊಂದಿಗೆ ಸಭೆಗಳನ್ನು ಆಯೋಜಿಸಲು ಅನುಮತಿ ನೀಡಲಾಗಿದೆ. ಈ ರೀತಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ ಕನ್ಹಯ್ಯಾ ಕುಮಾರ್ ಅವರ ಮೇಲೆ ಯುವಕನೊಬ್ಬ ಮಸಿ ಎರಚಿದ ಘಟನೆ ನಡೆದಿದೆ.
ಲಕ್ನೋದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕನ್ಹಯ್ಯಾ ಕುಮಾರ್ ಅವರು ಭಾಗವಹಿಸಿದ್ದ ವೇಳೆ ಯುವಕನೊಬ್ಬ ಅವರ ಮೇಲೆ ರಾಸಾಯನಿಕ ಮಿಶ್ರಿತ ಮಸಿ ಎರಚಿದ್ದಾನೆ. ಇದು ಕನ್ಹಯ್ಯಾ ಕುಮಾರ್ ಅವರ ಮೇಲೆ ನೇರವಾಗಿ ಬೀಳಲಿಲ್ಲವಾದರೂ ಅವರ ಪಕ್ಕದಲ್ಲಿದ್ದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಮಸಿ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಕೃಷಿಕರು, ಗ್ರಾಮೀಣ ಜನತೆಗೆ ಕೇಂದ್ರದಿಂದ ಗುಡ್ ನ್ಯೂಸ್: ಅನೇಕ ಯೋಜನೆ ಜಾರಿಗೆ ಕ್ರಮ
ಮಸಿ ಎರಚಿದ ಯುವಕನನ್ನು ಲಕ್ನೋ ನಿವಾಸಿ ದೇವಾಂಶ ಬಾಜ್ಪೇಯಿ ಎಂದು ಗುರುತಿಸಲಾಗಿದ್ದು, ಈತನನ್ನು ಹಿಡಿದು ಥಳಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಳಿಕ ಪೊಲೀಸರ ವಶಕ್ಕೆ ನೀಡಿದ್ದಾರೆ. ವಿಚಾರಣೆ ವೇಳೆ ಆರೋಪಿ ಯುವಕ, ಕನ್ಹಯ್ಯಾ ಕುಮಾರ್ ಓರ್ವ ದೇಶದ್ರೋಹಿ. ಹೀಗಾಗಿಯೇ ಅವರ ಮೇಲೆ ಮಸಿ ಎರಚಿದ್ದಾಗಿ ಹೇಳಿದ್ದಾನೆ. ಅಲ್ಲದೆ ಮಸಿಗೆ ರಾಸಾಯನಿಕ ಮಿಶ್ರ ಮಾಡಿರುವುದನ್ನೂ ಸಹ ಒಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.