ದೆಹಲಿ: ರಾಹು-ಕೇತು ವಿಗ್ರಹಗಳನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ಮಂದಿರ್ ಮಾರ್ಗ್ ನಲ್ಲಿ ನಡೆದ ಈ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಪ್ರಸಿದ್ಧ ಬಿರ್ಲಾ ದೇವಸ್ಥಾನದ ನವಗ್ರಹ ದೇಗುಲದಲ್ಲಿ ರಾಹು-ಕೇತು ವಿಗ್ರಹಗಳನ್ನು ವಿರೂಪಗೊಳಿಸಲಾಗಿದೆ. ಈ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿಚಾರಣೆ ವೇಳೆ ಆಘಾತಕಾರಿ ಅಂಶ ಬಯಲಾಗಿದೆ.
ಶನಿವಾರ ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿರ್ಲಾ ದೇವಾಲಯದ ಉದ್ಯಾನದಲ್ಲಿ ನವಗ್ರಹ ದೇವಾಲಯವಿದ್ದು, ವ್ಯಕ್ತಿಯೊಬ್ಬ ರಾಹು-ಕೇತುಗಳ ವಿಗ್ರಹಗಳನ್ನು ಗುರಿಯಾಗಿಸಿದ್ದಾನೆ. ಇದನ್ನು ಗಮನಿಸಿದ ಅರ್ಚಕರು ಕೂಡಲೇ ತಡೆದಿದ್ದು, ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ವ್ಯಕ್ತಿಯನ್ನು 45 ವರ್ಷದ ಏಕಲವ್ಯ ಎಂದು ಗುರುತಿಸಲಾಗಿದೆ. ಈತ ಜಮ್ಮು ಮೂಲದವನಾಗಿದ್ದು ಪ್ರಸ್ತುತ ದೆಹಲಿಯಲ್ಲಿ ನೆಲೆಸಿದ್ದಾನೆ.
ಈತನ ಕುಟುಂಬದ ನಾಲ್ವರು ಕೋವಿಡ್ ಸೋಂಕಿನ ಮೊದಲ ಮತ್ತು ಎರಡನೇ ತರಂಗಗಳಲ್ಲಿ ಸಾವನ್ನಪ್ಪಿದ್ದಾರೆ. ಕುಟುಂಬದಲ್ಲಿ ಅವನು ಮತ್ತು ಅವನ ತಂದೆ ಮಾತ್ರ ಬದುಕುಳಿದಿದ್ದಾರೆ. ಮನೆಯಲ್ಲಿ ಅಕಾಲಿಕ ಮರಣದಿಂದ ಕೋಪಗೊಂಡ ಈತ ಬಿರ್ಲಾ ದೇವಸ್ಥಾನದ ಹಿಂಭಾಗದ ಉದ್ಯಾನದಲ್ಲಿನ ರಾಹು ಮತ್ತು ಕೇತುವಿನ ವಿಗ್ರಹಗಳನ್ನು ಹಾನಿಗೊಳಿಸುತ್ತಾನೆ. ಈ ಪ್ರಕರಣದಲ್ಲಿ ಮಂದಿರ ಮಾರ್ಗ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಜನವರಿ 29 ರಂದು ನಡೆದಿದೆ.