ನವದೆಹಲಿ: ಡಿಜಿಟಲ್ ಹೆಲ್ತ್, ಡಿಜಿಟಲ್ ಕರೆನ್ಸಿ, ಇ ಬಿಲ್ಲಿಂಗ್ ವ್ಯವಸ್ಥೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ದೇಶದ ಮಕ್ಕಳಿಗೆ ವಿಶ್ವದರ್ಜೆಯ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಪಿಎಂ ಇ-ವಿದ್ಯಾ ವಿಶ್ವವಿದ್ಯಾಲಯ (PM e-vidya university) ಪರಿಚಯಿಸಿದೆ.
ಕೊರೊನಾ ಸಾಂಕ್ರಾಮಿಕ ನಡುವೆಯೇ ಶಾಲಾ-ಕಾಲೇಜುಗಳು ಬಾಗಿಲು ಮುಚ್ಚುತ್ತಿದ್ದು, ಆನ್ ಲೈನ್ ತರಗತಿಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರ ಪ್ರಧಾನಿ ಇ-ವಿದ್ಯಾ ವಿಶ್ವವಿದ್ಯಾಲಯ ಯೋಜನೆ ಆರಂಭಿಸುವುದಾಗಿ ಘೋಷಿಸಿದೆ.
ಈ ಯೋಜನೆಯಡಿ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೂ ಅವಕಾಶ ನೀಡಲಾಗಿದ್ದು, ಒನ್ ಕ್ಲಾಸ್, ಒನ್ ಟಿವಿ ಚಾನಲ್ ಯೋಜನೆ ಜಾರಿಗೊಳಿಸಲಾಗುತ್ತಿದೆ. 200 ಟಿವಿ ಚಾನಲ್ ಗಳ ಮೂಲಕ ಶೈಕ್ಷಣಿಕ ಪಾಠ ಆರಂಭಿಸಲಾಗುವುದು. 1-12ನೇ ತರಗತಿವರೆಗೆ ಮಕ್ಕಳಿಗೆ ಚಾನಲ್ ಮೂಲಕವೇ ಪಾಠ ಹೇಳಲಾಗುವುದು.
ಯುವಜನತೆ ಕೌಶಲ್ಯ ಅಭಿವೃದ್ಧಿಗಾಗಿ ದೇಶ್ ಇ-ಪೋರ್ಟಲ್ ಆರಂಭಿಸಲಾಗುತ್ತಿದ್ದು, ಶಿಕ್ಷಕರಿಗೂ ವಿಶೇಷ ತರಬೇತಿ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.