ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಆನಂದ್ ಸಿಂಗ್ ಅವರು, ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಬಾರದಾ ಎಂದು ಪ್ರಶ್ನಿಸಿದ್ದಾರೆ.
ಯಾಕೆ ಹೋಗಿದ್ದೆ ಎಂದು ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ. ಅದೇ ವಿಚಾರದ ಬಗ್ಗೆ ಮತ್ತೆ ನಾನು ಸಹ ಹೇಳಬೇಕಾ? ನಾನು ಎಲ್ಲಿಯೂ ಅಸಮಾಧಾನ ಇದೆ ಎಂದು ಹೇಳಿಕೊಂಡಿಲ್ಲ. ತುಂಗಾ ಆರತಿ ಮಾದರಿಯಲ್ಲಿ ಅವರ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದ್ದು, ಇದರ ಬಗ್ಗೆ ಚರ್ಚೆ ಮಾಡಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ.
ನನ್ನ ಅಳಿಯನ ಮನೆಗೆ ಅವನ ಕಾರಿನಲ್ಲಿಯೇ ಹೋಗಿದ್ದೆ. ಬರುವಾಗ ಡಿ.ಕೆ. ಶಿವಕುಮಾರ್ ಕಾಲ್ ಮಾಡಿದ್ದಕ್ಕೆ ಹೋದೆ. ಡಿಕೆಶಿಯೊಂದಿಗೆ ನಾನು ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.