ಪಂಚರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗವು ಫೆಬ್ರವರಿ 11ರವರೆಗೂ ಚುನಾವಣಾ ರ್ಯಾಲಿ, ರೋಡ್ ಶೋಗಳಿಗೆ ನಿರ್ಬಂಧವನ್ನು ಮುಂದುವರಿಸಿದೆ. ಆದರೆ ಸೀಮಿತ ಸಂಖ್ಯೆಯ ಜನರೊಂದಿಗೆ ಸಭೆ ಹಾಗೂ ಕ್ಯಾಂಪೇನ್ ನಡೆಸಲು ಅನುಮತಿ ನೀಡಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಚಾರ ನಡೆಸಲು ಕೆಲವು ಸಡಿಲಿಕೆಗಳನ್ನು ನೀಡಿದೆ. ಗರಿಷ್ಠ 1000 ಜನಸಂಖ್ಯೆಯೊಂದಿಗೆ ಗೊತ್ತುಪಡಿಸಲಾದ ತೆರೆದ ಸ್ಥಳದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ಮನೆ ಬಾಗಿಲಿಗೆ ಪ್ರಚಾರಕ್ಕೆ ತೆರಳಲು ಈ ಹಿಂದೆ ಇದ್ದ ಜನರ ಮಿತಿಯನ್ನು ಹೆಚ್ಚಿಸಿದೆ. ಈ ಹಿಂದೆ 10 ಜನರಿಗೆ ಮೀಸಲಿದ್ದ ಜನರ ಮಿತಿಯನ್ನು 20 ಜನರಿಗೆ ಏರಿಕೆ ಮಾಡಲಾಗಿದೆ.
ಮಾರ್ಗಸೂಚಿ ಬದಲಾವಣೆ ವಿಚಾರವಾಗಿ ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶದ ಆರೋಗ್ಯ ಸಚಿವಾಲಯ, ಮುಖ್ಯ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿಯ ಜೊತೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಸಭೆಯನ್ನು ನಡೆಸಿ ಈ ನಿರ್ಧಾರ ಕೈಗೊಂಡಿದೆ.