ನಟ ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಚಿತ್ರ ದೇಶ, ವಿದೇಶಗಳಲ್ಲಿಯೂ ಖ್ಯಾತಿ ಗಳಿಸಿದೆ. ಸಾಕಷ್ಟು ಸೆಲೆಬ್ರಿಟಿಗಳು ಚಿತ್ರದ ಡೈಲಾಗ್ ಹಾಗೂ ಹಾಡಿಗೆ ಹೆಜ್ಜೆ ಹಾಕಿದ್ದೆ ಇದಕ್ಕೆ ಕಾರಣ. ಈಗ ಈ ಚಿತ್ರ ಮತ್ತೊಂದು ಸಾಧನೆಯನ್ನು ಮಾಡಿದೆ.
ತೆಲುಗಿನಲ್ಲಿ ಸಿದ್ಧವಾದ ಪುಷ್ಪ ಚಿತ್ರವು ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಿತ್ತು. ತೆಲುಗು ಚಿತ್ರವೊಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿ 100 ಕೋಟಿ ಗಳಿಸಿ ಸಾಧನೆ ಮಾಡಿರುವ ಚಿತ್ರವಾಗಿ ಪುಷ್ಪ ಹೊರ ಹೊಮ್ಮಿದೆ.
ಕೊರೊನಾದಿಂದಾಗಿ ಚಿತ್ರ ಮಂದಿರಗಳಲ್ಲಿ ಶೇ. 50ರಷ್ಟು ಆಸನ ವ್ಯವಸ್ಥೆಗೆ ಅವಕಾಶ ನೀಡಿದ ಸಂದರ್ಭದಲ್ಲಿಯೇ ಈ ಚಿತ್ರವು ಹಿಂದಿಯಲ್ಲಿ 100 ಕೋಟಿಗೂ ಅಧಿಕ ಗಳಿಸಿ ಸಾಧನೆ ಮಾಡಿದೆ. ಇದನ್ನು ಕಂಡು ಇಡೀ ಚಿತ್ರರಂಗವೇ ಆಶ್ಚರ್ಯ ವ್ಯಕ್ತಪಡಿಸುತ್ತಿದೆ. ಈ ಹಿಂದೆ ತೆಲಗು ಸೇರಿದಂತೆ ಬೇರೊಂದು ಭಾಷೆಯ ಚಿತ್ರ ಹಿಂದಿಯಲ್ಲಿ ಡಬ್ ಆಗಿ ಇಷ್ಟೊಂದು ಗಳಿಕೆ ಮಾಡಿರಲಿಲ್ಲ. ಬಾಹುಬಲಿ, ಕೆಜಿಎಪ್ ಚಿತ್ರ ಸಾಕಷ್ಟು ಹಿಟ್ ಆಗಿದ್ದರೂ ಇಷ್ಟೊಂದು ಗಳಿಕೆ ಮಾಡಲು ಆಗಿರಲಿಲ್ಲ. ಈಗ ಎಲ್ಲ ಚಿತ್ರಗಳ ದಾಖಲೆಗಳನ್ನು ಪುಷ್ಪ ಮುರಿದಿದೆ.
ಪುಷ್ಪ ಚಿತ್ರವು ಡಿ. 17ರಂದು ದೇಶ ಸೇರಿದಂತೆ ವಿದೇಶಗಳಲ್ಲಿಯೂ ತೆರೆ ಕಂಡಿತ್ತು. ಆರಂಭದಿಂದಲೂ ಪುಷ್ಪ ಚಿತ್ರ ಭರ್ಜರಿ ಯಶಸ್ಸು ಕಂಡಿತು. ಕೊರೊನಾದಿಂದಾಗಿ ಚಿತ್ರ ಮಂದಿರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಈ ಚಿತ್ರವನ್ನು ಒಟಿಟಿಯಲ್ಲಿ ಪ್ರಸಾರ ಮಾಡಲಾಯಿತು. ಅಲ್ಲಿಯೂ ಜನರು ಮುಗಿಬಿದ್ದು ಚಿತ್ರವನ್ನು ವೀಕ್ಷಿಸಿದ್ದಾರೆ. ಈ ಚಿತ್ರವು ಸದ್ಯ ವಿಶ್ವದಾದ್ಯಂತ ಬರೋಬ್ಬರಿ 350 ಕೋಟಿ ರೂ. ಗೂ ಅಧಿಕ ಗಳಿಸಿದೆ. ಈ ಮೂಲಕ ಕನ್ನಡ ಮೂಲದ ನಟಿ ರಶ್ಮಿಕಾಗೂ ದೊಡ್ಡ ಹೆಸರು ಬಂದಂತಾಗಿದೆ.