ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಚರ್ಚೆ ಆರಂಭವಾಗಿರುವಾಗಲೇ ಅವರ ವಿರುದ್ಧ ಅಕ್ರಮ ಆಸ್ತಿಗಳಿಕೆ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ರವಿ ಡಿ ಚನ್ನಣ್ಣನವರ್, ಸುಳ್ಳು ಆರೋಪ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಕೆಲವರು ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಅಕ್ರಮ ಆಸ್ತಿಗಳಿಕೆ ಎಂದು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಅಕ್ರಮ ಆಸ್ತಿಗಳಿಕೆ ಮಾಡಿಲ್ಲ. ಕಾನೂನು ಬದ್ಧವಾಗಿಯೇ ನನ್ನ ಆಸ್ತಿಗಳಿವೆ. ಎಲ್ಲವೂ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಗಳಾಗಿದ್ದು, ಎಲ್ಲವೂ ಆಯಾ ವರ್ಷವೇ ತೆರಿಗೆ ಇಲಾಖೆಗೂ ಮಾಹಿತಿ ನೀಡಲಾಗಿದೆ.
ನನ್ನ ವಿರುದ್ಧ ದುರುದ್ದೇಶ ಪೂರ್ವಕವಾಗಿ ನನ್ನ ತೆಜೋವಧೆ ಮಾಡಲು ಆರೋಪ ಮಾಡಲಾಗುತ್ತಿದ್ದು, ನನ್ನ ವಿರುದ್ಧದ ಆರೋಪಕ್ಕೆ ಕಾನೂನಾತ್ಮಕವಾಗಿ ನ್ಯಾಯವಾದಿಗಳ ಮೂಲಕ ಲೀಗಲ್ ನೋಟಿಸ್ ನೀಡಿದ್ದೇನೆ. ಆದರೆ ಅದಕ್ಕೆ ಉತ್ತರ ಬಾರದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ 3 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾಗಿದ್ದೇನೆ. ಸುಳ್ಳು ಆರೋಪಕ್ಕೆ 2 ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಪ್ರಕರಣ ಹೂಡಲಿದ್ದೇನೆ ಎಂದು ತಿಳಿಸಿದ್ದಾರೆ.
ಸುಳ್ಳು ಸುದ್ದಿ ನನ್ನ ವಿರುದ್ಧ ಹರಿದಾಡುತ್ತಿರುವ ಕಾರಣ ತಡೆಯಾಜ್ಞೆ ತಂದಿದ್ದೇನೆ. ಹಲವು ಸಂಕಷ್ಟಗಳ ನಡುವೆ ಬೆಳೆದ ನಾನು ನನ್ನ ಸ್ವಾಭಿಮಾನ, ವ್ಯಕ್ತಿತ್ವದ ಬಗ್ಗೆ ಸದಾ ಎಚ್ಚರದಲ್ಲಿ ಇದ್ದೇನೆ. ಸ್ವಚ್ಛ ವ್ಯವಸ್ಥೆ ಬಯಸುವವರ ಬಗ್ಗೆ ಗೌರವವಿದೆ. ತಡೆಯಾಜ್ಞೆ ಅಭಿವ್ಯಕ್ತಿ ಸತ್ವ ಕುಗ್ಗಿಸಲು ಅಲ್ಲ. ಸುಳ್ಳು ಸುದ್ದಿ ಹರಡಿಸುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.