ಬುಲಂದಷಹರ್ : ವೈದ್ಯರ ಮೇಲಿನ ಕೋಪಕ್ಕೆ ಅವರ 8 ವರ್ಷದ ಮಗನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಛಠಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಭಾಗದಲ್ಲಿ ಖ್ಯಾತಿ ಪಡೆದಿದ್ದ ವೈದ್ಯರೊಬ್ಬರು ತಮ್ಮ ಆಸ್ಪತ್ರೆಯಲ್ಲಿ ಶಹೀದ್ ಹಾಗೂ ನಿಜಾಮ್ ಎಂಬುವವರನ್ನು ಕಂಪೌಂಡರ್ ಆಗಿ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಆದರೆ, ಅವರಿಬ್ಬರು ಯಾವುದೋ ಒಂದು ತಪ್ಪು ಮಾಡಿದ್ದ ಹಿನ್ನೆಲೆಯಲ್ಲಿ ಅವರನ್ನು ಕಳೆದ ಎರಡು ವರ್ಷಗಳ ಹಿಂದೆಯೇ ವೈದ್ಯರು, ಕೆಲಸದಿಂದ ವಜಾಗೊಳಿಸಿದ್ದರು. ಇದೇ ಸೇಡನ್ನು ಇವರು ಇಟ್ಟುಕೊಂಡಿದ್ದರು ಎನ್ನಲಾಗಿದೆ.
ವೈದ್ಯರು ಮಗ ಕಾಣೆಯಾದ ಕುರಿತು ದೂರು ದಾಖಲಿಸುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರು, ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರ ಬಂದಿದೆ. ಆ ನಂತರ ಅವರನ್ನು ಕರೆದುಕೊಂಡು ಸ್ಥಳಕ್ಕೆ ಹೋದಾಗ ಮಗುವಿನ ಶವ ಪತ್ತೆಯಾಗಿದೆ ಎಂದು ಅಲ್ಲಿನ ದೇವಾಯಿ ಸರ್ಕಲ್ ಇನ್ ಪೆಕ್ಟರ್ ವಂದನಾ ಶರ್ಮಾ ಹೇಳಿದ್ದಾರೆ.
ಕೆಲಸದಿಂದ ವಜಾಗೊಳಿಸಿದ್ದಕ್ಕೆ ಇವರು ವೈದ್ಯರ ಮೇಲೆ ಸಿಟ್ಟು ಇಟ್ಟುಕೊಂಡಿದ್ದರು. ಹಗೆ ಸಾಧಿಸುವುದಕ್ಕಾಗಿ ಪ್ರಯತ್ನಿಸುತ್ತಿದ್ದರು. ಹೀಗಾಗಿ ಮಗನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಆರಂಭಿಸಿದ್ದಾರೆ.