ಗದಗ: ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಪಾಠ ಮಾಡದೇ ಶಾಲೆಗೆ ರಜೆ ಹಾಕಿ ಮರಳು ದಂಧೆಯಲ್ಲಿ ಭಾಗಿಯಾದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಹೆಬ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಣಿತ ಶಿಕ್ಷಕ ಎಸ್.ಕೆ. ಪಾಟೀಲ್ ಶಾಲೆಗೆ ರಜೆ ಹಾಕಿ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ತನಗೆ ಪುರುಸೊತ್ತು ಆದಾಗ ಶಾಲೆಗೆ ಬರುವ ಶಿಕ್ಷಕ ಪಾಟೀಲ್, ಹಾಜರಿ ಪುಸ್ತಕಕ್ಕೆ 2 ತಿಂಗಳವರೆಗಿನ ಸಹಿ ಒಟ್ಟಿಗೆ ಹಾಕಿ ತೆರಳುತ್ತಿದ್ದಾರೆ. ಸರ್ಕಾರಿ ಸಂಬಳ ಪಡೆದು ಮಕ್ಕಳಿಗೆ ಪಾಠ ಮಾಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಗಣಿತದಲ್ಲಿ ಹಿಂದೆಬೀಳುವಂತಾಗಿದೆ.
ಮರಳು ದಂಧೆ ಮಾಡುತ್ತಿರುವ ಶಿಕ್ಷಕನಿಗೆ ಅಧಿಕಾರಿಗಳೂ ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮಸ್ಥರ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಶಿಕ್ಷಕನ ವಿರುದ್ಧ ಕ್ರಮಕ್ಕೆ ಮುಖ್ಯಶಿಕ್ಷಕ ಮುಂದಾಗಿದ್ದಾರೆ.