ಹುಬ್ಬಳ್ಳಿ: ನಾನು ಎಸ್.ಆರ್. ಪಾಟೀಲ್ ಅವರನ್ನು ಭೇಟಿ ಮಾಡುತ್ತೇನೆ. ಏನು ಆಗುತ್ತದೆಯೋ ನೋಡಬೇಕಿದೆ. ನಮ್ಮ ಜೊತೆ ಬರುವವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಇಲ್ಲಿ ‘ಅಲಿಂಗ’ ಮಾಡುತ್ತೇನೆ ಅಲ್ಲಿ ‘ಅಗೌ’ ಮಾಡುತ್ತೇನೆ. ಅಲ್ಪಸಂಖ್ಯಾತ –ಲಿಂಗಾಯಿತರು, ಗೌಡ- ಅಲ್ಪಸಂಖ್ಯಾತರು. ಅವರು ಅಹಿಂದ ಮಾಡಿಲ್ಲವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನವರಿಗೆ ಟಾಂಗ್ ಕೊಟ್ಟ ಸಿ.ಎಂ. ಇಬ್ರಾಹಿಂ ಹೇಳಿಕೆ ನೀಡುವ ವೇಳೆ ಕಣ್ಣೀರು ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ನಾನು ಹೊರಗೆ ಬಂದಿದ್ದೇನೆ. ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನ ಶಾಪ ತುಂಬಾ ಕೆಟ್ಟದ್ದು. ಅದು ಇವಾಗ ತಟ್ಟುತ್ತಿದೆ. ನಾನು ವಿಷಕಂಠನಿದ್ದಂತೆ ಎಲ್ಲವನ್ನು ನುಂಗಿಕೊಂಡಿದ್ದೇನೆ. ನನ್ನನ್ನು ಎಂಎಲ್ಸಿ ಮಾಡಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ನಾಳೆಯೇ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸಲಿ. ಯಾರು ಗೆಲ್ಲುತ್ತಾರೆ ಎಂದು ನೋಡೋಣವೆಂದು ಸಿದ್ದರಾಮಯ್ಯನವರಿಗೆ ಸಿ.ಎಂ. ಇಬ್ರಾಹಿಂ ಸವಾಲು ಹಾಕಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಹಳ ದೊಡ್ಡವರು, ಅವರು ನಮ್ಮಂತವರನ್ನು ಏಕೆ ಮಾತನಾಡಿಸುತ್ತಾರೆ. ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡುವುದಾಗಿ ಹೇಳಿದ್ದರು. ಆದರೆ, ಇದುವರೆಗೆ ಏನೂ ಆಗಿಲ್ಲವೆಂದು ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.