ಬೆಂಗಳೂರು: ವಿಶೇಷಚೇತನ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಾಫಿಕ್ ಎ ಎಸ್ ಐ ನಾರಾಯಣ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನ ಹಲಸೂರು ಗೇಟ್ ಬಳಿ ಟೋಯಿಂಗ್ ವಿಚಾರವಾಗಿ ಎ ಎಸ್ ಐ ನಾರಾಯಣ್ ವಿಕಲಚೇತನ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು. ಮಹಿಳೆಯನ್ನು ಬೂಟು ಕಾಲಿನಿಂದ ಥಳಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಈ ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಎ ಎಸ್ ಐ ನಾರಾಯಣ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ವಾಹನ ಟೋಯಿಂಗ್ ವೇಳೆ ಮಹಿಳೆ ಎ ಎಸ್ ಐ ಮೇಲೆ ಕಲ್ಲು ತೂರಾಟ ನಡೆಸಿದ್ದರು, ಇದರಿಂದ ಕೋಪಗೊಂಡ ಎ ಎಸ್ ಐ ಮಹಿಳೆಯ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದ್ದರು.