ಪೂರ್ವ ದೆಹಲಿಯ ಕಸ್ತೂರ್ಬಾ ನಗರದಲ್ಲಿ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮತ್ತು ಮೆರವಣಿಗೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಶನಿವಾರದಂದು 14 ವರ್ಷದ ಹುಡುಗನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತ್ವರಿತ ಮತ್ತು ಸರಿಯಾದ ತನಿಖೆಗಾಗಿ ಎಸಿಪಿ ನೇತೃತ್ವದಲ್ಲಿ ರಚಿಸಿರುವ 10 ಸದಸ್ಯರ ವಿಶೇಷ ತನಿಖಾ ತಂಡ(ಎಸ್ಐಟಿ), ಪ್ರಕರಣದ ಕೊನೆಯ ಆರೋಪಿ 14 ವರ್ಷದ ಅಪ್ರಾಪ್ತನನ್ನು ಶನಿವಾರ ಬಂಧಿಸಿದೆ. ಈ ಮೂಲಕ ಎಂಟು ಮಹಿಳೆಯರು, ಮೂವರು ಅಪ್ರಾಪ್ತ ಹುಡುಗರು ಮತ್ತು ಒಬ್ಬ ಪುರುಷ ಸೇರಿದಂತೆ, ಎಫ್ಐಆರ್ನಲ್ಲಿ ಹೆಸರಿಸಲಾದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಅಪಹರಣಕ್ಕೆ ಬಳಸಿದ್ದ ಆಟೋ ರಿಕ್ಷಾವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಶಹದಾರ ಡಿಸಿಪಿ ಆರ್ ಸತ್ಯಸುಂದರಂ ತಿಳಿಸಿದ್ದಾರೆ.
ಕಳೆದ ಬುಧವಾರ ಬಂಧಿತ ಆರೋಪಿಗಳು ಮಹಿಳೆಯನ್ನ ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಆನಂತರ ಆಕೆಯ ಮೇಲೆ ಹಲ್ಲೆ ಮಾಡಿ, ಕೂದಲು ಕತ್ತರಿಸಿ, ಚಪ್ಪಲಿ ಹಾರ ಹಾಕಿ ಕಸ್ತೂರಬಾ ನಗರದ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದರು ಎಂದು ದೂರು ದಾಖಲಾಗಿತ್ತು.
ಈ ಪ್ರಕರಣದ ಬಂಧಿತ ಆರೋಪಿಗಳೆಲ್ಲರು ಒಂದೇ ಕುಟುಂಬದವರು, ಅವರ ಮನೆಯ ಹುಡುಗನೊಬ್ಬ ಸಂತ್ರಸ್ತ ಮಹಿಳೆಯ ಹಿಂದೆ ಸುತ್ತುತ್ತಿದ್ದ. ಕಳೆದ ವರ್ಷ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡ. ಆತನ ಸಾವಿಗೆ ಈ ಮಹಿಳೆಯೆ ಕಾರಣ ಎಂದು ದೂಷಿಸಿದ ಕುಟುಂಬ, ಆಕೆಯ ವಿರುದ್ಧ ಈ ರೀತಿಯಾಗಿ ಸೇಡು ತೀರಿಸಿಕೊಂಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.