ನವದೆಹಲಿ: ಗರ್ಭಿಣಿಯರು ಕೆಲಸಕ್ಕೆ ಅಸಮರ್ಥ ಎನ್ನುವ ರೀತಿ ಹೊರಡಿಸಿದ್ದ ಸುತ್ತೋಲೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಪಸ್ ಪಡೆದುಕೊಂಡಿದೆ.
ಗರ್ಭಿಣಿಯಾಗಿ ಮೂರು ತಿಂಗಳಾದ ಮಹಿಳೆಯರು ಕರ್ತವ್ಯ ನಿರ್ವಹಣೆಗೆ ತಾತ್ಕಾಲಿಕವಾಗಿ ಅರ್ಹರಲ್ಲ ಎನ್ನುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸುತ್ತೋಲೆ ಹೊರಡಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸುತ್ತೋಲೆ ವಾಪಸ್ ಪಡೆಯಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನೇಮಕಾತಿಗೆ ಸಂಬಂಧಿಸಿದ ಫಿಟ್ನೆಸ್ ಮಾನದಂಡಗಳನ್ನು ಇತ್ತೀಚೆಗೆ ಪರಿಷ್ಕರಿಸಲಾಗಿದ್ದು, ಅದರಲ್ಲಿ ಗರ್ಭಿಣಿ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ 3 ತಿಂಗಳಿಗಿಂತ ಮೇಲ್ಪಟ್ಟ ಗರ್ಭಿಣಿ ಅಭ್ಯರ್ಥಿಯನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಲಾಗುತ್ತದೆ. ಹೆರಿಗೆಯಾದ ನಂತರ 4 ತಿಂಗಳೊಳಗೆ ಬ್ಯಾಂಕಿಗೆ ಸೇರ್ಪಡೆಯಾಗಬಹುದು ಎಂದು ಹೇಳಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಹೊಸ ನಿಯಮಕ್ಕೆ ಮಹಿಳಾ ಆಯೋಗ, ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧೆಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಗರ್ಭಿಣಿಯರ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ಸೂಚನೆಗಳಿದ್ದು ಸುತ್ತೋಲೆ ರದ್ದು ಮಾಡಲಾಗಿದೆ ಎನ್ನಲಾಗಿದೆ.