ಅಥಣಿ: ಜಾರಕಿಹೊಳಿ ಸಹೋದರರ ನಡುವೆ ಮತ್ತೆ ವಾಕ್ಸಮರಗಳು ಮುಂದುವರೆದಿದ್ದು, ಸುಳ್ಳು ಆರೋಪಗಳನ್ನು ಮಾಡಿದರೆ ಈ ಕ್ಷಣವೇ ರಾಜೀನಾಮೆ ನೀಡಲು ಸಿದ್ಧ ಎಂದು ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಗೋಕಾಕ್ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ತೋರಿಸಿದರೆ ಸ್ಥಳದಲ್ಲೇ ರಾಜೀನಾಮೆ ನೀಡಲು ಸಿದ್ಧ. ಈ ಬಗ್ಗೆ ಸತೀಶ್ ಜಾರಕಿಹೊಳಿಗೆ ಚಾಲೇಂಜ್ ಮಾಡುತ್ತೇನೆ ಎಂದು ಹೇಳಿದರು.
ಅಥಣಿ ಕ್ಷೇತ್ರಕ್ಕಾಗಿಯೇ ಜಗಳ ಆರಂಭವಾಯಿತು. ನೀರಾವರಿ ಯೋಜನೆ ಅಥಣಿ ಕ್ಷೇತ್ರದಲ್ಲಿ ಮಾಡಿಲ್ಲ ಎಂಬ ವಿಚಾರದಿಂದಲೇ ಬೇಸರವಾಗಿ ನಾನು ಕಾಂಗ್ರೆಸ್ ತೊರೆದೆ. ಇಂದು ಕ್ಷೇತ್ರದ ಅಭಿವೃದ್ಧಿಯನ್ನು ಬಿಜೆಪಿ ಮಾಡುತ್ತಿದೆ. ಇಲ್ಲಿಯೂ ರಸ್ತೆ ಅಭಿವೃದ್ಧಿ ಕೆಲಸಗಳು ನಡೆದಿವೆ. ಸುಮ್ಮನೇ ಆರೋಪಗಳನ್ನು ಮಾಡುವ ಅಗತ್ಯವಿಲ್ಲ ಎಂದು ಗರಂ ಆದರು.
ಇನ್ನು ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ವಿಚಾರವಾಗಿ ಈ ಬಗ್ಗೆ ಬಹಿರಂಗವಾಗಿ ನಾನು ಹೇಳಿಕೆ ಕೊಡಲು ಆಗದು. ನಾನಾಗಲಿ, ಕುಮಟಳ್ಳಿಯಾಗಲಿ ಸಚಿವರಾಗುವ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಹೈಕಮಾಂಡ್ ಹಾಗೂ ಪಕ್ಷ ಏನು ನಿರ್ಧಾರ ಕೈಗೊಳ್ಳುತ್ತೋ ಅದಕ್ಕೆ ನಾವು ಬದ್ಧ ಎಂದು ಹೇಳಿದರು.
ಸಚಿವ ಉಮೇಶ್ ಕತ್ತಿ ಹಾಗೂ ಕೆಲ ಬಿಜೆಪಿ ನಾಯಕರಿಂದ ಸಿಎಂ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಜಾರಕಿಹೊಳಿ, ಅವರು ಯಾವ ವಿಚಾರದ ಬಗ್ಗೆ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಒಂದೊಮ್ಮೆ ಸಿಎಂ ನಮ್ಮನ್ನು ಕರೆದು ಕೇಳಿದರೆ ಮುಂದಿನ ದಿನಗಳಲ್ಲಿ ಉತ್ತರ ನೀಡುತೇನೆ ಎಂದು ತಿಳಿಸಿದರು.