ಇಸ್ರೇಲ್ ಜೊತೆಗಿನ ಒಪ್ಪಂದದ ಭಾಗವಾಗಿ 2017 ರಲ್ಲಿ ಭಾರತ ಸರ್ಕಾರ ಪೆಗಾಸಸ್ ಸ್ಪೈ ಟೂಲ್ ಅನ್ನು ಖರೀದಿಸಿದೆ ಎಂದಿರುವ ವರದಿಯ ಕುರಿತು ರಾಹುಲ್ ಗಾಂಧಿ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ. ‘ಮೋದಿ ಸರ್ಕಾರ ದೇಶದ್ರೋಹ ಮಾಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ಪ್ರಾಥಮಿಕ ಪ್ರಜಾಪ್ರಭುತ್ವ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಸಾರ್ವಜನಿಕರ ಮೇಲೆ ಕಣ್ಣಿಡಲು ಮೋದಿ ಸರ್ಕಾರ ಪೆಗಾಸಸ್ ಅನ್ನು ಖರೀದಿಸಿದೆ. ಸರ್ಕಾರಿ ಅಧಿಕಾರಿಗಳು, ವಿರೋಧ ಪಕ್ಷದ ನಾಯಕರು, ಸಶಸ್ತ್ರ ಪಡೆಗಳು, ನ್ಯಾಯಾಂಗಗಳು ಈ ಫೋನ್ ಕದ್ದಾಲಿಕೆಯ ಗುರಿಯಾಗಿವೆ. ಇದು ದೇಶದ್ರೋಹ. ಮೋದಿ ಸರ್ಕಾರ ದೇಶದ್ರೋಹ ಮಾಡಿದೆ ಎಂದು ಆರೋಪಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
2017ರಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಸುಮಾರು 2ಬಿಲಿಯನ್ ಯುಎಸ್ಡಿ ಡಾಲರ್ ಒಪ್ಪಂದವಾಗಿದ್ದು, ಅದರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಜೊತೆಗೆ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲಾಗಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಮೋದಿ ಸರ್ಕಾರ, ಭಾರತದ ಶತ್ರುವಿನಂತೆ ವರ್ತಿಸಿದೆ, ಭಾರತೀಯ ನಾಗರಿಕರ ವಿರುದ್ಧ ಯುದ್ಧಾಸ್ತ್ರ ಬಳಸಿರುವುದು ಏಕೆ ? ಪೆಗಾಸಸ್ ಬಳಸಿ ಅಕ್ರಮವಾಗಿ ಸ್ನೂಪಿಂಗ್ ಮಾಡುವುದು ದೇಶದ್ರೋಹಕ್ಕೆ ಸಮ. ಯಾರೂ ಕಾನೂನಿಗಿಂತ ಮೇಲಲ್ಲ, ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತೇವೆ, ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.