ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ 6 ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ಎಂಬ ಸರ್ಕಾರದ ಸಾಧನೆ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿರುವುದಕ್ಕೆ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರಿಲೀಸ್ ಮಾಡಿದರು ಪುಸ್ತಕದಲ್ಲಿ ಸಾಧನೆಗಳಿಗಿಂತ ಭರವಸೆಯೇ ಹೆಚ್ಚಿದೆ ಎಂದು ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪುಕ್ಸಟ್ಟೆ ಪ್ರಚಾರಕ್ಕಾಗಿ ರಾಜ್ಯ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಯೋಜನೆ ಜಾರಿಗೊಳಿಸುವುದಕ್ಕಿಂತ ಹೆಚ್ಚು ಜಾಹೀರಾತಿಗೆ ವ್ಯಯಿಸುತ್ತಿದೆ. ನಮ್ಮ ಸರ್ಕಾರ ಜಾರಿಗೆ ತಂದ ಯೋಜನೆಗಳಿಗೆ ಹೆಸರು ಬದಲಿಸುವುದೇ ಬಿಜೆಪಿ ಸಾಧನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕ ಕಲ್ಯಾಣ ನಿಧಿ ಹಣ ನೀಡಿ ಸಾಧನೆ ಎಂದು ಜಾಹೀರಾತು ಕೊಟ್ಟಿದ್ದಾರೆ. 237.9 ಕೋಟಿ ಪೈಕಿ ರಾಜ್ಯ ಸರ್ಕಾರದಿಂದ ಒಂದು ಪೈಸೆ ಕೊಟ್ಟಿಲ್ಲ ಆದರೂ ನಮ್ಮ ಸರ್ಕಾರದ ಸಾಧನೆ ಎಂದು ಘೋಷಿಸುತ್ತಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಅಂತಾ ಪ್ರಧಾನಿ ಘೋಷಿಸಿದರು. ರೈತರ ಖಾತೆಗೆ ಪ್ರತಿವರ್ಷ 6 ಸಾವಿರ ಕೊಡುತ್ತೇವೆ ಅಂದಿದ್ರು. ಬಿ ಎಸ್ ವೈ ಸಿಎಂ ಆಗಿದ್ದಾಗ ನಾವು 4 ಸಾವಿರ ಕೊಡುತ್ತೇವೆ ಅಂದ್ರು. ಆದರೆ ವಾಸ್ತವದಲ್ಲಿ ರಾಜ್ಯ ಸರ್ಕಾರ ಈವರೆಗೆ ಕೇವಲ 2 ಸಾವಿರ ಕೊಟ್ಟಿದೆ ಎಂದರು.
ರಾಜ್ಯದಲ್ಲಿ ಅತಿವೃಷ್ಟಿ, ನೆರೆಯಿಂದ ಮನೆ, ಬೆಳೆ ಹಾನಿಯಾಗಿತ್ತು. ಸಂತ್ರಸ್ತರಿಗೆ ಪರಿಹಾರದ ಬದಲು ಜಾಹೀರಾತಿಗೆ ಹೆಚ್ಚು ಖರ್ಚುಮಾಡಿದ್ದಾರೆ. ಎನ್ ಡಿ ಆರ್ ಎಫ್ ನಿಯಮದಂತೆ ಪರಿಹಾರ ಕೊಡುತ್ತೇವೆ, ಮಾನವೀಯತೆ ದೃಷ್ಟಿಯಿಂದ ಪರಿಹಾರ ಕೊಡ್ತೀವಿ ಅಂದ್ರು. ಈವರೆಗೆ ಯಾವುದೇ ಪರಿಹಾರ ನೀಡದೇ ಜಾಹೀರಾತು ಕೊಟ್ಟಿದ್ದಾರೆ. ನಮ್ಮದು ಅಂತ:ಕರಣವಿರುವ ಸರ್ಕಾರ ಎಂದು ಸಿಎಂ ಹೇಳುತ್ತಿದ್ದಾರೆ ಆದರೆ ಸರ್ಕಾರ ಅನುಕಂಪ ತೋರುವ ಅಗತ್ಯವಿಲ್ಲ. ಬಡವರು, ಸಂತ್ರಸ್ತರಿಗೆ ಪರಿಹಾರ ನೀಡುವುದು, ಜನರ ಸಮಸ್ಯೆಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.
ವಿದ್ಯಾಸಿರಿ ಯೋಜನೆ ನಿಲ್ಲಿಸಿ ರೈತ ವಿದ್ಯಾನಿಧಿ ಯೋಜನೆ ಅಂತಾರೆ. ನಮ್ಮ ಅವಧಿಯಲ್ಲಿ ವಿದ್ಯಾಸಿರಿ ಯೋಜನೆ ಜಾರಿ ಮಾಡಿದ್ದೆವು. ಅದರ ಹೆಸರು ಬದಲಿಸಿ ರೈತ ವಿದ್ಯಾನಿಧಿ ಯೋಜನೆ ಮಾಡಿದ್ದಾರೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಆದರೆ ಕಾಯ್ದೆ ವಾಪಸ್ ಪಡೆದಿಲ್ಲ. ಕೋವಿಡ್ ನಿರ್ವಹಣೆ ಸಮರ್ಥವಾಗಿ ಮಾಡಿದ್ದೇವೆ ಅಂದ್ರು. ಎರಡನೇ ಅಲೆಯಲ್ಲಿ ಜನ ಬೀದಿ ಬೀದಿಯಲ್ಲಿ ಸಾವನ್ನಪ್ಪಿದ್ರು. ಕೋವಿಡ್ ನಿಂದ 3.5 ಲಕ್ಷ ಜನ ಮೃತಪಟ್ಟಿದ್ದಾರೆ. ಆದರೆ 38 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಸುಳ್ಳು ಲೆಕ್ಕ ತೋರಿಸಿದ್ದಾರೆ. ಆಕ್ಸಿಜನ್, ಬೆಡ್, ಔಷದ, ಚಿಕಿತ್ಸೆ ಇಲ್ಲದೇ ಜನ ಸಾವನ್ನಪ್ಪಿದರು. ಎಲ್ಲೆಂದರಲ್ಲಿ, ನದಿಗಳಿಗೆ ಹೆಣ ಬಿಸಾಕಿದರು. ಸತ್ತವರ ಅಂತ್ಯಸಂಸ್ಕಾರವನ್ನೂ ಮಾಡಲಿಲ್ಲ.
ಎನ್ ಸಿ ಆರ್ ಬಿ ದಾಖಲೆ ಪ್ರಕಾರ ಕೋವಿಡ್ ಸಂದರ್ಭದಲ್ಲಿ 1,53,000 ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉದ್ಯೋಗ ನಷ್ಟ, ನಿರುದ್ಯೋಗ, ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡರು. ಯಾರೊಬ್ಬರಿಗೂ ಈವರೆಗೂ ಪರಿಹಾರವನ್ನೂ ಸರಿಯಾಗಿ ನೀಡಲಿಲ್ಲ. ಕೋವಿಡ್ ಸಂದರ್ಭದಲ್ಲಿ ಇವರ ಸಾಧನೆಯೇನು? ಕೇವಲ ಜಾಹೀರಾತು ನೀಡಿದರೆ ಸಾಧನೆಯಾಗುತ್ತಾ? ಎಂದು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.