ಹೆಣ್ಣು ಮಗುವನ್ನ ದೇಣಿಗೆ ನೀಡಲು ಆಕೆ ಯಾವುದೇ ಆಸ್ತಿಯಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಅಭಿಪ್ರಾಯಪಟ್ಟಿದ್ದು, ವ್ಯಕ್ತಿಯೊಬ್ಬ ತನ್ನ 17 ವರ್ಷದ ಮಗಳನ್ನು ‘ದಾನ’ದಲ್ಲಿ ನೀಡಿದ್ದ ಪ್ರಕರಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಸ್ವಯಂಘೋಷಿತ ದೇವಮಾನವ ಶಂಕೇಶ್ವರ ಢಕ್ನೆ ಮತ್ತು ಆತನ ಶಿಷ್ಯ ಸೋಪಾನ್ ಧಾಂಕೆ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ವಿಭಾ ಕಂಕಣವಾಡಿ ಅವರ ಏಕ ಪೀಠ ಈ ತಿಂಗಳ ಆರಂಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇಬ್ಬರು ಆರೋಪಿಗಳು ಬಾಲಕಿ ಮತ್ತು ಆಕೆಯ ತಂದೆಯೊಂದಿಗೆ ಜಲ್ನಾ ಜಿಲ್ಲೆಯ ಬದ್ನಾಪುರದ ದೇವಸ್ಥಾನದಲ್ಲಿ ವಾಸಿಸುತ್ತಿದ್ದರು. ಆಗಸ್ಟ್ 2021 ರಂದು ಬಾಲಕಿ ತನ್ನ ಮೇಲೆ ಇವರಿಬ್ಬರು ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಳು. ನಂತರ ಅವರನ್ನು ಬಂಧಿಸಲಾಯಿತು. 2018 ರಲ್ಲಿ, 100 ರೂಪಾಯಿಯ ಸ್ಟಾಂಪ್ ಪೇಪರ್ ಅನ್ನು “ದಾನಪತ್ರ” ಎಂದು ಬರೆದು ಹುಡುಗಿಯ ತಂದೆ, ಢಕ್ನೆಗೆ ತನ್ನ ಮಗಳನ್ನೆ ದಾನ ಮಾಡಿದ್ದಾರೆ.
ಹುಡುಗಿಯ ತಂದೆ ತನ್ನ ಮಗಳನ್ನು ದಾನವಾಗಿ ಬಾಬಾನಿಗೆ ನೀಡಿದ್ದಾನೆ, ಈ ‘ಕನ್ಯಾದಾನ’ವು ದೇವರ ಸನ್ನಿಧಿಯಲ್ಲಿ ನಡೆಸಲಾಗಿದೆ ಎಂದು ದಾನಪತ್ರದಲ್ಲಿ ಬರೆಯಲಾಗಿದೆ. ತಂದೆಯಾದವನು ತನ್ನ ಮಗಳ ರಕ್ಷಕನೆಂದು ಕರೆಸಿಕೊಳ್ಳುತ್ತಾನೆ ಅವನೇ ಈ ರೀತಿ ಕನ್ಯಾದಾನ ಏಕೆ ಕೊಡುತ್ತಾನೆ? ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಇದು ಆತಂಕಕಾರಿ ಸಂಗತಿ. ಹೆಣ್ಣುಮಕ್ಕಳನ್ನ ದೇಣಿಗೆಯಾಗಿ ನೀಡಲು ಅವರು ಆಸ್ತಿಯಲ್ಲ, ಎಂದು ನ್ಯಾಯಮೂರ್ತಿ ಕಂಕಣವಾಡಿ ಹೇಳಿದ್ದಾರೆ. ಈ ಪ್ರಕರಣ ಸಂಬಂಧ ಸೂಕ್ತ ತನಿಖೆಯಾಗಬೇಕು, ನ್ಯಾಯಾಲಯ ಆ ಅಪ್ರಾಪ್ತ ಬಾಲಕಿಯ ಭವಿಷ್ಯದ ಬಗ್ಗೆ ಚಿಂತಿಸುತ್ತಿದೆ. ದೂರುದಾರಳು, ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಅಪ್ರಾಪ್ತೆಯೆ ಎಂದು ಕಂಡುಹಿಡಿಯಲು ಜಲ್ನಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಆದೇಶಿಸಿರುವ ನ್ಯಾಯಾಲಯ, ಆದಷ್ಟು ಬೇಗ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಬಂಧಿತ ಆರೋಪಿಗಳಿಬ್ಬರಿಗೂ, ತಲಾ 25,000 ರೂ.ಗಳ ಬಾಂಡ್‌ನಲ್ಲಿ ಜಾಮೀನು ನೀಡಿ, ಮುಂದಿನ ವಿಚಾರಣೆಯನ್ನು ಫೆಬ್ರವರಿಗೆ ಮುಂದೂಡಿದೆ.