ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿಯೇ ಇದೆ. ಆದರೆ ಸೌಂದರ್ಯ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೂ ಕಾರಣವಾಗಿರಬಹುದು ಎಂಬ ಮಾತು ಕೇಳಿಬರುತ್ತಿದೆ.
ಯಾವುದಕ್ಕೂ ಕೊರತೆಯಿಲ್ಲದ ಶ್ರೀಮಂತ ಕುಟುಂಬ, ಮಾಜಿ ಸಿಎಂ ಮೊಮ್ಮಗಳು ಎಂಬ ಗೌರವ, ಪತಿಯೂ ವೈದ್ಯ, ಸ್ವತಃ ತಾನೂ ಕೂಡ ಡಾಕ್ಟರ್ ಸುಖಸಂಸಾರಕ್ಕೆ ಸಾಕ್ಷಿ ಎಂಬಂತೆ ಮುದ್ದಾದ 9 ತಿಂಗಳ ಗಂಡು ಮಗು… ಇಷ್ಟೆಲ್ಲ ಇದ್ದರೂ ಡಾ.ಸೌಂದರ್ಯ ದಿಢೀರ್ ಆಗಿ ಜೀವನದ ಕಟ್ಟಕಡೆಯ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾದರೂ ಯಾಕೆ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡುತ್ತಿದೆ.
ಡಾ.ಸೌಂದರ್ಯ 9 ತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಬಾಣಂತಿ ಸನ್ನಿ ಎಂಬ ಮಾನಸಿಕ ಖಿನ್ನತೆಗೆ ಸೌಂದರ್ಯ ಒಳಗಾಗಿದ್ದರಾ….? ಎಂಬ ಚರ್ಚೆ ಆರಂಭವಾಗಿದೆ. ಯಾರ ಬಳಿಯೂ ಹೇಳಿಕೊಳ್ಳಲಾಗದಂತಹ ಮಾನಸಿಕ ಖಿನ್ನತೆಯಿಂದ ಸೌಂದರ್ಯ ಬಳಲುತ್ತಿದ್ದಿರಬಹುದು. ಇದೇ ಕಾರಣಕ್ಕೆ ಪುಟ್ಟ ಕಂದನನ್ನು ಬಿಟ್ಟು ಏಕಾಏಕಿ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಂಡಿರಬಹುದು ಎಂಬ ಮಾತು ಕೇಳಿಬರುತ್ತಿದೆ.
ಹಲವು ಬಾಣಂತಿಯರಲ್ಲಿ ಮಗು ಹುಟ್ಟಿದ ಎರಡು ವಾರದ ಅವಧಿವರೆಗೆ ಬಾಣಂತಿ ಸನ್ನಿ ಕಾಡುತ್ತದೆ. ಈ ಮಾನಸಿಕ ಖಿನ್ನತೆ ಎರಡು ವಾರಕ್ಕಿಂತಲೂ ಹೆಚ್ಚು ಮುಂದುವರೆದರೆ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂಬುದು ವೈದ್ಯರ ಅಭಿಪ್ರಾಯ. ಇಂತದ್ದೇ ಮಾನಸಿಕ ಖಿನ್ನತೆ ಕೂಡ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳ ಸಾವಿಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.