ಕೋಲಾರ : ತಂದೆ- ತಾಯಿಯ ಮೇಲಿನ ಸಿಟ್ಟಿಗೆ ರೇಷ್ಮೆ ಹುಳು ತಿನ್ನುವ ಸೊಪ್ಪಿಗೆ ಮಗಳು ವಿಷ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಸದ್ಯ ಹೆತ್ತ ಮಗಳ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.
ಈ ಘಟನೆ ತಾಲೂಕಿನ ಯಳಚೀಪುರ ಗ್ರಾಮದಲ್ಲಿ ನಡೆದಿದ್ದು, ಜಮೀನಿನಲ್ಲಿ ತನಗೆ ಬರಬೇಕಿದ್ದ ಆಸ್ತಿಯನ್ನು ನೀಡದ್ದಕ್ಕೆ ಮಗಳು ಈ ರೀತಿ ಮಾಡಿದ್ದಾಳೆ ಎಂದು ಪಾಲಕರು ಆರೋಪಿಸಿದ್ದಾರೆ.
ಮಗಳ ಈ ಕೃತ್ಯದಿಂದಾಗಿ ಸದ್ಯ ವೃದ್ಧ ದಂಪತಿಗೆ ದಾರಿ ಕಾಣದಂತಾಗಿದೆ. ರಾಮಣ್ಣ ಹಾಗೂ ಲಕ್ಷ್ಮಮ್ಮ ಎಂಬುವವರೇ ಮಗಳ ವಿರುದ್ಧ ನ್ಯಾಯಕ್ಕಾಗಿ ಅಲೆದಾಟ ನಡೆಸುತ್ತಿದ್ದಾರೆ. ಈ ದಂಪತಿಯು ತಮ್ಮ ಆಸ್ತಿಯನ್ನು ತಮ್ಮ ಮಕ್ಕಳಿಗೆ ಹಂಚಿಕೆ ಮಾಡಿದ್ದರು. ಆದರೆ, ಹಿರಿಯ ಮಗಳು ಮಾತ್ರ ಹೆಚ್ಚಿನ ಆಸ್ತಿಗೆ ಪಟ್ಟು ಹಿಡಿದಿದ್ದರು.
ಈ ವಿಷಯ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಹಲವು ಬಾರಿ ರಾಜಿ ಪಂಜಾಯಿತಿ ನಡೆಸಿದರೂ ಹಿರಿಯ ಮಗಳು ಮಾತ್ರ ಹೆಚ್ಚಿನ ಆಸ್ತಿಗೆ ಪಟ್ಟು ಹಿಡಿದಿದ್ದರು. ಇನ್ನೊಂದೆಡೆ ಮಕ್ಕಳಿಗೆ ಆಸ್ತಿ ನೀಡಿ ವೃದ್ಧ ದಂಪತಿ ರೇಷ್ಮೆ ಹುಳು ಸಾಕಾಣಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು.
ಇತ್ತ ಪೋಷಕರ ಮೇಲೆ ಸೇಡಿಟ್ಟಿದ್ದ ಮಗಳು ರೇಷ್ಮೆ ಹುಳುಗಳಿಗೆ ಆಹಾರವಾಗಿ ಬಳಸುತ್ತಿದ್ದ ಸೊಪ್ಪಿಗೆ ವಿಷ ಹಾಕಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ. ಈ ಸೊಪ್ಪನ್ನು ಹುಳುಗಳಿಗೆ ಹಾಕಿ ಅವುಗಳು ಸಾಯುತ್ತಿವೆ. ಇದರಿಂದ 1 ಲಕ್ಷದಷ್ಟು ನಷ್ಟವಾಗಿದೆ ಎಂದು ಅವರು ಆರೋಪಿಸುತ್ತಿದ್ದಾರೆ.
ಮಗಳು ಚೌಡಮ್ಮ, ಅಳಿಯ ಲಕ್ಷ್ಮಣ್ ಹಾಗೂ ಮೊಮ್ಮಗ ಆನಂದ್ ಈ ಕೃತ್ಯ ಎಸಗಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇವೆ ಎಂದು ತಂದೆ -ತಾಯಿ ಹೇಳಿದ್ದಾರೆ.