
ಬೆಂಗಳೂರು: ಯಾವುದೇ ವ್ಯಕ್ತಿ ಅಥವಾ ಸರ್ಕಾರಕ್ಕಾಗಲಿ ಅರಿವು ಮುಖ್ಯ. ಆರ್ಥಿಕ ಸಂಪನ್ಮೂಲದ ಕೊರತೆ ನಮ್ಮನ್ನು ಜಿಜ್ಞಾಸೆಗೆ ದೂಡುತ್ತಿದೆ. ಆದರೆ ನಮ್ಮ ಸರ್ಕಾರ ಅರಿವು ಹಾಗೂ ಅಂತಃಕರಣದ ಸರ್ಕಾರ. ಜನರಿಗಾಗಿ, ಜನರಿಗೋಸ್ಕರ, ಜನ ಕಲ್ಯಾಣಕ್ಕಾಗಿ ಇರುವ ಸರ್ಕಾರವಾಗಿದ್ದು, ಜನರ ಬೆಂಗಾವಲಾಗಿ ರಾಜ್ಯ ಸರ್ಕಾರ ಸದಾ ಇದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಅಧಿಕಾರಕ್ಕೆ ಬಂದು ಇಂದಿಗೆ 6 ತಿಂಗಳು ಪೂರೈಕೆಯಾಗಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆ ಕುರಿತು ’ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು’ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಸಿಎಂ, ಕಳೆದ 6 ತಿಂಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ವಿವರಿಸಿದರು.
ಸರ್ಕಾರಕ್ಕಾಗಲಿ, ಯಾವುದೇ ವ್ಯಕ್ತಿಗಾಗಲಿ ಅರಿವು ಮುಖ್ಯ. ಅರಿವೇ ಗುರು ಎಂಬ ಮಾತಿದೆ. ಹಾಗಾಗಿ ಜನರ ಸಂಕಷ್ಟ, ನೋವು-ನಲಿವಿನ ಬಗ್ಗೆ ನಮ್ಮ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ. ಜನರಿಗಾಗಿ ಜನರಿಗೋಸ್ಕರ ಜನರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ದುಡಿಯುತ್ತದೆ. ನಾವು ತೆಗೆದುಕೊಳ್ಳುವ ಪ್ರತಿ ನಿರ್ಣಯ ಸಾರ್ವತ್ರಿಕ ಹಿತವೇ ಅದರ ಕೇಂದ್ರ ಬಿಂದು. ಕಳೆದ 6 ತಿಂಗಳ ನನ್ನ ಅವಧಿಯಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿಗೆ ನಾವು ಅವಕಾಶ ಕೊಟ್ಟಿಲ್ಲ ಎಂಬುದನ್ನು ಅತ್ಯಂತ ಪ್ರಾಂಜಲ ಮನಸ್ಸಿನಿಂದ ಹೇಳುತ್ತೇನೆ ಎಂದರು.
ರಾಜ್ಯದಲ್ಲಿ 10 ಕೃಷಿ ವಲಯಗಳಿವೆ. 365 ದಿನ ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆಯಾಗುತ್ತದೆ. ಇಂತಹ ಭಾಗ್ಯ ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಕರ್ನಾಟಕದಲ್ಲಿ ಸಂಪದ್ಭರಿತ ಅರಣ್ಯವಿದೆ. ಖನಿಜ ಸಂಪನ್ಮೂಲವಿದೆ. ಗಂಗರು, ಚೋಳರು, ಬಾದಾಮಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯದ ಅರಸರು, ಮೈಸೂರು ಅರಸರು ಕರ್ನಾಟಕ್ಕೆ ಅದ್ಭುತವಾದ ಸಂಸ್ಕೃತಿ ಬಿಟ್ಟು ಹೋಗಿದ್ದಾರೆ, ಆಳ್ವಿಕೆಯೇ ಬೇರೆ ಆಡಳಿತ ನಡೆಸುವುದೇ ಬೇರೆ ಎಂದು 11ನೇ ಶತಮಾನದಲ್ಲೇ ಮಹನಿಯರು ಹೇಳಿದ್ದಾರೆ ಎಂದು ಹೇಳಿದರು.
ಶೇ.1ರಷ್ಟು ಕೃಷಿ ವಲಯ ಅಭಿವೃದ್ಧಿಯಾದರೆ ಶೇ.4ರಷ್ಟು ಕೈಗಾರಿಕಾ ವಲಯ ಅಭಿವೃದ್ಧಿ ಆಗುತ್ತೆ. ನಮ್ಮೆಲ್ಲರನ್ನು ಸುರಕ್ಷಿತರನ್ನಾಗಿ ಮಾಡುವ ರೈತ ಇಂದು ಅಭದ್ರತೆಯಲ್ಲಿ ಬದುಕುತ್ತಿದ್ದಾನೆ. ತನ್ನ ಮಕ್ಕಳಿಗೇ ವಿದ್ಯಾಭ್ಯಾಸ ನೀಡಲು ಪರದಾಡುವ ಪರಿಸ್ಥಿತಿಯಲ್ಲಿದ್ದಾನೆ. ಹಳ್ಳಿಗಳಲ್ಲಿ ರೈತನ ಸ್ಥಿತಿ ಶೋಚನೀಯವಾಗಿದೆ. ಭೂಮಿ ಹೆಚ್ಚಾಗಲ್ಲ, ಆದರೆ ಅದರ ಮೇಲಿನ ಅವಲಂಬಿತರು ಹೆಚ್ಚುತ್ತಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದೆವು. ಕಾರ್ಮಿಕ ಮಕ್ಕಳ ಸಂಕಷ್ಟ ನೀಗಿಸಲು ಕಾರ್ಮಿಕ ಮಕ್ಕಳಿಗಾಗಿಯೂ ಸ್ಕಾಲರ್ ಶಿಪ್ ಯೋಜನೆ ಜಾರಿಗೆ ತರಲಾಗಿದೆ. 14 ಲಕ್ಷಕ್ಕಿಂತ ಹೆಚ್ಚು ರೈತರಿಗೆ ಪರಿಹಾರ ಧನ ನೀಡಲಾಗಿದೆ. ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ ಹೆಚ್ಚಿಸಿದ್ದೇವೆ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳು ತಲುಪಬೇಕು. ಅಭಿವೃದ್ಧಿ ಜತೆಗೆ ಕಾನೂನು ಸುವ್ಯವಸ್ಥೆ ಕೂಡ ಪಾಲನೆಯಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.