ನಮ್ಮ ಹಿಂದಿನ ತಲೆಮಾರುಗಳಿಗೆ ಗೋವು ಒಂದು ಸಂಪತ್ತಾಗಿತ್ತು. ಅದರ ಪಾಲನೆ, ಪೋಷಣೆಯಿಂದ ಅವರು ಆರ್ಥಿಕ ಬಲ ಪಡೆಯುವ ಜತೆಗೆ ಆರೋಗ್ಯವನ್ನು ಕೂಡ ಪಡೆಯುತ್ತಿದ್ದರು. ಸಾಕುಪ್ರಣಿಗಳ ಪೈಕಿ ತನ್ನ ಎಲ್ಲ ಉತ್ಪನ್ನಗಳನ್ನು ಮನುಷ್ಯರ ಒಳಿತಿಗಾಗಿಯೇ ನೀಡುವ ಏಕೈಕ ಪ್ರಾಣಿ ಎಂದರೆ ಅದು ಗೋವು ಮಾತ್ರ.
ಅದಕ್ಕೆ ಗೋವನ್ನು ’’ಗೋಮಾತೆ’’ ಎನ್ನಲಾಗುತ್ತದೆ. ಇದರ ಮಹತ್ವವನ್ನು ಇಂದಿನ ಯುವಪೀಳಿಗೆಗೆ ಅರಿವು ಮೂಡಿಸಲು ದೆಹಲಿ ವಿಶ್ವವಿದ್ಯಾಲಯದ ಹನ್ಸರಾಜ್ ಕಾಲೇಜು ನಿರ್ಧರಿಸಿದೆ. ಹಾಗಾಗಿಯೇ ಅವರು ಕಾಲೇಜಿನಲ್ಲೇ ಗೋವುಗಳ ಸಾಕಣಿಕೆ ಮತ್ತು ಸಂಶೋಧನಾ ಕೇಂದ್ರವೊಂದನ್ನು ತೆರೆದಿದ್ದಾರೆ.
ಈ ಗೋವು ಪಾಲನೆ ಕೇಂದ್ರದ ಹೆಸರು ’’ಸ್ವಾಮಿ ದಯಾನಂದ ಸರಸ್ವತಿ ಗೋವು ಸಂವರ್ಧನ ಏವಂ ಅನುಸಂಧಾನ ಕೇಂದ್ರ’’ ಎಂದು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮ ಶರ್ಮಾ ಅವರ ನೇತೃತ್ವದಲ್ಲಿ ಇದರ ಕೆಲಸಗಳು ಸಾಗುತ್ತಿವೆ. ಆರ್ಯ ಸಮಾಜದ ಆಧಾರದ ಮೇಲಿನ ಟ್ರಸ್ಟ್‌ವೊಂದರ ನಿರ್ವಹಣೆಯಲ್ಲಿರುವ ಕಾಲೇಜಿನಲ್ಲಿ, ಮುಂಚಿನಿಂದಲೂ ತಿಂಗಳ ಮೊದಲ ದಿನ ಹೋಮವನ್ನು ಮಾಡುತ್ತಿದ್ದೇವೆ. ಆ ಹೋಮವನ್ನು ಆಯಾ ತಿಂಗಳಲ್ಲಿ ಹುಟ್ಟುಹಬ್ಬ ಹೊಂದಿರುವವರ ಶ್ರೇಯಸ್ಸಿಗೆ ಅರ್ಪಿಸುತ್ತೇವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಗೋಶಾಲೆಯಿಂದ ಹೋಮಕ್ಕೆ ಅಗತ್ಯವಾದ ತುಪ್ಪ ಮತ್ತು ಸಗಣಿಯನ್ನು ಪಡೆಯಲು ಅನುಕೂಲವಾಗುತ್ತದೆ ಎಂಬ ಉದ್ದೇಶ ಕೂಡ ಪಾಲನೆ ಕೇಂದ್ರ ಶುರುಮಾಡುವುದರ ಹಿಂದಿದೆ. ಎಡಪಕ್ಷೀಯ ಚಿಂತನೆಯ ಸಿಪಿಐ(ಎಂ) ಮಾರ್ಗದರ್ಶನವುಳ್ಳ ಕಾಲೇಜಿನಲ್ಲಿನ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸದಸ್ಯರು ಗೋಶಾಲೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಗೋಶಾಲೆಯ ಸ್ಥಳವು ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಮೀಸಲಿರಿಸಿದ್ದ ಜಾಗವಾಗಿದೆ ಎಂದು ತಗಾದೆ ತೆಗೆದಿದ್ದಾರೆ.