2022 ರ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 25ರವರೆಗೆ ಚೀನಾದ ಝೆಜಿಯಾಂಗ್ ನ ಹ್ಯಾಂಗ್ಝೌನಲ್ಲಿ ನಡೆಯಲಿದೆ. 2022 ರ ಏಷ್ಯನ್ ಗೇಮ್ಸ್ ನಲ್ಲಿ ಒಟ್ಟು 61 ವಿಭಾಗಗಳಿದ್ದು, ಒಲಿಂಪಿಕ್ ಕ್ರೀಡೆಗಳಾದ ಈಜು, ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಈಕ್ವೆಸ್ಟ್ರಿಯನ್, ಫೆನ್ಸಿಂಗ್, ಫುಟ್ ಬಾಲ್, ಹಾಕಿ, ಜೂಡೋ, ಕಬಡ್ಡಿ ಸೇರಿದಂತೆ ಒಟ್ಟು 40 ಕ್ರೀಡೆಗಳನ್ನು ಒಳಗೊಂಡಿರುತ್ತದೆ.
ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA) ಅನುಮೋದಿಸಿದ ನಂತರ ಈ ವರ್ಷ ಇ-ಸ್ಪೋರ್ಟ್ಸ್ ಮತ್ತು ಬ್ರೇಕ್ ಡ್ಯಾನ್ಸಿಂಗ್ ಪ್ರಥಮ ಬಾರಿಗೆ ಏಷ್ಯನ್ ಗೇಮ್ಸ್ ನಲ್ಲಿ ಪಾದಾರ್ಪಣೆ ಮಾಡಲಿವೆ. ಆದರೆ ವೀಕ್ಷಕರ ಉತ್ಸಾಹವನ್ನು ಹೆಚ್ಚಿಸಲು ಕ್ರಿಕೆಟ್ ಅನ್ನು ಟಿ 20 ಸ್ವರೂಪದಲ್ಲಿ ಏಷ್ಯನ್ ಗೇಮ್ಸ್ಗೆ ಮತ್ತೆ ಸೇರ್ಪಡಿಸಲಾಗುತ್ತಿದೆ.
ಭಾರತವು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ (OCA) ದಕ್ಷಿಣ ಏಷ್ಯಾ ವಲಯದ ಸದಸ್ಯ ರಾಷ್ಟ್ರವಾಗಿದೆ. ಏಷ್ಯನ್ ಕ್ರೀಡಾಕೂಟದ ಎಲ್ಲಾ ಆವೃತ್ತಿಗಳಲ್ಲಿ ಸ್ಪರ್ಧಿಸಿದ ಏಳು ದೇಶಗಳ ಪೈಕಿ ಭಾರತವು ಒಂದಾಗಿದೆ. ಭಾರತವು ಪ್ರತಿ ಏಷ್ಯನ್ ಗೇಮ್ಸ್ನಲ್ಲಿ ಕನಿಷ್ಠ ಒಂದು ಚಿನ್ನದ ಪದಕವನ್ನು ಪಡೆದುಕೊಂಡಿದೆ.
ಅಷ್ಟೇ ಅಲ್ಲದೇ 1990 ರ ಆವೃತ್ತಿಯನ್ನು ಹೊರತುಪಡಿಸಿ ಪದಕ ಗಿಟ್ಟಿಸಿಕೊಳ್ಳುವ ಪಟ್ಟಿಯಲ್ಲಿ ಪ್ರತಿಬಾರಿ ಅಗ್ರ 10 ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. ಏಷ್ಯನ್ ಗೇಮ್ಸ್ನಲ್ಲಿ ಇಲ್ಲಿಯವರೆಗೆ ಭಾರತ 139 ಚಿನ್ನ, 178 ಬೆಳ್ಳಿ ಮತ್ತು 299 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು, ಈ ವರ್ಷ ಪದಕಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಇದೇ ಮೊದಲ ಬಾರಿಗೆ ಓಷಿಯಾನಿಯಾ ದೇಶಗಳ 300ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಈ ವರ್ಷದ ಅಂದ್ರೆ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಓಷಿಯಾನಿಯಾ ಅಥ್ಲೀಟ್ ಗಳಿಗೆ ಐದು ಕ್ರೀಡೆಗಳಲ್ಲಿ ಅಂದರೆ ಟ್ರಯಥ್ಲಾನ್, ಅಥ್ಲೆಟಿಕ್ಸ್, ವುಶು, ರೋಲರ್ ಸ್ಕೇಟಿಂಗ್ ಮತ್ತು ವೇಟ್ಲಿಫ್ಟಿಂಗ್ನಲ್ಲಿ ಸ್ಪರ್ಧಿಸಲು ಅನುಮತಿಸಲಾಗಿದೆ.
ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ, (SPN), ನವೆಂಬರ್ 2021 ರಿಂದ ಸೆಪ್ಟೆಂಬರ್ 2023 ರವರೆಗೆ 2022 ರ ಏಷ್ಯನ್ ಗೇಮ್ಸ್ನ ವಿಶೇಷ ಹಕ್ಕುಗಳನ್ನು ಪಡೆದುಕೊಂಡಿದೆ. 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಅನ್ನು ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಅಫ್ಘಾನಿಸ್ತಾನ, ಭೂತಾನ್ ಮತ್ತು ಮಾಲ್ಡೀವ್ಸ್ ಸೇರಿದಂತೆ ಉಪಖಂಡದಾದ್ಯಂತ ತನ್ನ ಕ್ರೀಡಾ ಚಾನೆಲ್ಗಳಲ್ಲಿ ಪ್ರಸಾರ ಮಾಡಲು ಎಸ್ಪಿಎನ್ ಗೆ ವಿಶೇಷ ಹಕ್ಕುಳಿವೆ. ಜೊತೆಗೆ ಪಂದ್ಯಾವಳಿಯೂ ಓಟಿಟಿ ಪ್ಲಾಟ್ಫಾರ್ಮ್ ಆದ ಸೋನಿ ಲೈವ್ ನಲ್ಲಿಯೂ ಕೂಡಾ ಲಭ್ಯವಿರುತ್ತದೆ.