ಈಗಾಗಲೇ ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿ ಸೋತು ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದೆ. ಇದರ ಮಧ್ಯೆಯೇ ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದೆ.
ಭಾರತೀಯ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ನಾಯಕ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಏಕದಿನ ಸರಣಿಯನ್ನು ಕನ್ನಡಿಗ ಕೆ.ಎಲ್. ರಾಹುಲ್ ಮುನ್ನಡೆಸಿದ್ದರು.
ಆದರೆ, ಈ ಸರಣಿಯಲ್ಲಿ ಭಾರತ ಮುಗ್ಗರಿಸಿದ್ದು, ರಾಹುಲ್ ಅವರಿಗೆ ತೀವ್ರ ನೋವಿಗೆ ಕಾರಣವಾಗಿತ್ತು. ಈಗ ವೆಸ್ಟ್ ಇಂಡೀಸ್ ನಲ್ಲಿ ನಡೆಯುವ ಸರಣಿಯಲ್ಲಿ ಕೆ.ಎಲ್. ರಾಹುಲ್ ಉಪ ನಾಯಕರಾಗಿ ಆಯ್ಕೆಯಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತವು 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಫೆ. 6ರಿಂದ ಪಂದ್ಯಗಳು ನಡೆಯಲಿವೆ. ಆದರೆ, ಮೊದಲ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಹೊರಗೆ ಉಳಿದಿದ್ದಾರೆ.
ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಅವರು ಮೊದಲ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಆದರೆ, ಮುಂದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಅವರು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸರಣಿಯಲ್ಲಿ ರಾಹುಲ್ ಅಂದುಕೊಂಡಂತೆ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಆತ್ಮವಿಶ್ವಾಸ ಕೊರತೆಯಲ್ಲಿರುವ ಅವರು, ಒಂದು ಪಂದ್ಯಕ್ಕೆ ಅಲಭ್ಯರಾಗಿ, ಮತ್ತೆ ತಂಡ ಸೇರಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಸರಣಿಯಲ್ಲಾದರೂ ಕೆ.ಎಲ್. ರಾಹುಲ್ ಉತ್ತಮ ಪ್ರದರ್ಶನ ತೋರಿ ಅಭಿಮಾನಿಗಳನ್ನು ರಂಜಿಸಲಿ ಎಂದು ಭಾರತೀಯರು ಬಯಸುತ್ತಿದ್ದಾರೆ.
ರೋಹಿತ್ ಅನುಪಸ್ಥಿತಿಯಲ್ಲಿ ರಾಹುಲ್, ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕರಾಗಿ ಕಣಕ್ಕೆ ಇಳಿದಿದ್ದರು. ಈಗ ರೋಹಿತ್ ಹಾಗೂ ಧವನ್ ಭಾರತೀಯ ತಂಡದ ಭಾಗವಾಗಿರುವುದರಿಂದಾಗಿ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಆದರೂ ಟಿ20ಯಲ್ಲಿ ಮಾತ್ರ ಆರಂಭಿಕರಾಗಿ ಕಣಕ್ಕೆ ಇಳಿಯುವುದಂತೂ ಪಕ್ಕಾ ಎನ್ನಲಾಗುತ್ತಿದೆ.