ಬೆಂಗಳೂರು: ಸಂಪುಟ ಸಭೆಯಲ್ಲಿ ವಲಸಿಗ ಸಚಿವರ ವಾಪಸಾತಿ ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ವಲಸಿಗ ಸಚಿವರು ವಾಪಸ್ ಹೋಗುವ ಬಗ್ಗೆ ಸುಮಾರು ಒಂದು ಗಂಟೆಗಳ ಕಾಲ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಎಸ್.ಟಿ. ಸೋಮಶೇಖರ್, ಕೆ. ಗೋಪಾಲಯ್ಯ, ಬೈರತಿ ಬಸವರಾಜ್, ಎಂಟಿಬಿ ನಾಗರಾಜ್, ನಾರಾಯಣಗೌಡ, ಡಾ.ಕೆ. ಸುಧಾಕರ ಸೇರಿದಂತೆ ವಲಸಿಗ ಸಚಿವರಿಂದ ಸಭೆಯಲ್ಲಿ ಸ್ಪಷ್ಟೀಕರಣ ನೀಡಲಾಗಿದೆ ಎನ್ನಲಾಗಿದೆ.
ನಾವು ಕಾಂಗ್ರೆಸ್ ಗೆ ಹೋಗುತ್ತೇವೆ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ. ನಾವು ಎಲ್ಲಿಯೂ ಹೋಗುವುದಿಲ್ಲ. ಬಿಜೆಪಿಯಲ್ಲಿಯೇ ಇರುತ್ತೇವೆ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಸೇರ್ಪಡೆ ಸಮಯದಲ್ಲಿ ನಡೆದ ಬೆಳವಣಿಗೆಗಳನ್ನು, ಆಗ ತಮ್ಮ ನಿವಾಸಕ್ಕೆ ಬಿಜೆಪಿ ನಾಯಕರು ಬಂದಿದ್ದರ ಬಗ್ಗೆ ಮಾಹಿತಿ ಸೇರಿ ಎಲ್ಲವನ್ನು ವಿವರವಾಗಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಹಿಂದೆ ನಡೆದಿರುವುದನ್ನು ಈಗ ಹೇಳುವುದು ಬೇಡವೆಂದು ಸಚಿವರಾದ ಆರ್. ಅಶೋಕ್, ಆನಂದ್ ಸಿಂಗ್ ಅವರು ಎಂಟಿಬಿ ನಾಗರಾಜ್ ಅವರನ್ನು ಸುಮ್ಮನಿರಿಸಿದ್ದಾರೆನ್ನಲಾಗಿದೆ.
ನಾವು ಯಾವತ್ತಿದ್ದರೂ ವಲಸಿಗರೇ ಎಂದು ಹೇಳುತ್ತಾರೆ. ಮುಂದಿನ ಬಾರಿ ಸರ್ಕಾರ ಬಂದ ವಲಸಿಗರೇ ಎಂದು ಕರೆಯುತ್ತಾರೆ ಎಂದು ಸಚಿವ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಲಸಿಗ ಸಚಿವರ ವಾಪಸಾತಿ ಬಗ್ಗೆ ಮುನಿರತ್ನ ಹೆಚ್ಚು ಮಾತನಾಡಿದ್ದಾರೆನ್ನಲಾಗಿದೆ.
ನೀವು ನಮ್ಮನ್ನು ಶಿವಮೊಗ್ಗಕ್ಕೆ ಕಳುಹಿಸಿದ್ರಿ, ನಾವು ಪಕ್ಷ ಬಿಡಲ್ಲ, ಎಲ್ಲಿಯೂ ಪಕ್ಷ ಬಿಡುವುದಿಲ್ಲ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ. ಕೊನೆಯಲ್ಲಿ ಪಕ್ಷಕ್ಕೆ ನಿಷ್ಠರಾಗಿರುತ್ತೇವೆ ಎಂದು ಸಚಿವರು ಹೇಳಿ ಚರ್ಚೆಗೆ ಅಂತ್ಯ ಹಾಡಲಾಗಿದೆ.
ನಿಮಗೆ ನಮ್ಮ ಸಪೋರ್ಟ್ ಯಾವಾಗಲೂ ಇರುತ್ತದೆ. ಯಾವುದೇ ಸಮಸ್ಯೆಯಿಲ್ಲ, ಯಾವುದೇ ಆತಂಕ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು, ನಿಮ್ಮ ಕೆಲಸದ ಬಗ್ಗೆ ವರಿಷ್ಠರಿಗೂ ಮೆಚ್ಚುಗೆ ಇದೆ ಎಂದು ತಿಳಿಸಿದ್ದಾರೆನ್ನಲಾಗಿದೆ.