ಬೆಂಗಳೂರು: ಪರಿಷತ್ ವಿಪಕ್ಷ ನಾಯಕನ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಕಾಂಗ್ರೆಸ್ ತೊರೆಯುವ ಸುಳಿವು ನೀಡಿರುವ ಹಿರಿಯ ನಾಯಕ, ಎಂಎಲ್ ಸಿ ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್ ಗು ನನಗೂ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹಿಂ, ಬಿ.ಕೆ.ಹರಿಪ್ರಸಾದ್ ಅವರಿಗೆ ಪರಿಷತ್ ವಿಪಕ್ಷ ನಾಯಕನ ಜವಾಬ್ದಾರಿ ನೀಡಿದ ಎಐಸಿಸಿ ನಿರ್ಧಾರ ನೋಡಿ ಸಂತೋಷವಾಯಿತು. ಡಿ.ಕೆ.ಶಿವಕುಮಾರ್ ಹಾಗೂ ಹರಿಪ್ರಸಾದ್ ಅವರದ್ದು ಒಂದೇ ರೀತಿ ವಿಚಾರಧಾರೆಗಳಿರುವುದರಿಂದ ಉತ್ತಮ ಟೀಮ್ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧಾರಕ್ಕೆ ವ್ಯಂಗ್ಯವಾಡಿದರು.
25 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದೆ. ಯೋಜನಾ ಆಯೋಗದ ಅಧ್ಯಕ್ಷನಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದೆ. ಅನ್ನಭಾಗ್ಯ ಯೋಜನೆಯಂತಹ ಮಹತ್ವದ ಯೋಜನೆ ಬಗ್ಗೆ ಸಲಹೆ ನೀಡಿದ್ದು ನಾನು. ಸಿದ್ದರಾಮಯ್ಯನವರಿಗಾಗಿ ದೇವೇಗೌಡರನ್ನು ಬಿಟ್ಟುಬಂದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲ್ತಿದ್ರು ಆಗ ಅವರಿಗೆ ಸಹಾಯ ಮಾಡಿದೆ. ಸಿದ್ದರಾಮಯ್ಯನವರಿಗೆ ಸಹಾಯ ಮಾಡಿದ್ದಕ್ಕೆ ಅವರು ನನಗೆ ಒಳ್ಳೆಯ ಕೊಡುಗೆ ಕೊಟ್ಟರು. ನನಗೆ ವಿಪಕ್ಷ ನಾಯಕನ ಸ್ಥಾನ ತಪ್ಪಿಸಿದ್ದಕ್ಕೆ ಸಿದ್ದರಾಮಯ್ಯನವರು ಉತ್ತರಿಸಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರೊಂದಿಗೆ ಈಗ ಯಾವುದೇ ಮಾತನಾಡಲ್ಲ, ಡಿ.ಕೆ.ಶಿವಕುಮಾರ್ ಗೂ ನನಗೂ ಹೊಂದಾಣಿಕೆಯಾಗಲ್ಲ. ಶೀಘ್ರದಲ್ಲಿಯೇ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಲವು ಬಾರಿ ಕರೆ ಮಾಡಿ ಮಾತನಾಡಿದ್ದಾರೆ. ದೇವೇಗೌಡರೊಂದಿಗೆ ಮಾತನಾಡಿ ಮುಂದಿನ ನಡೆ ಬಗ್ಗೆ ನಿರ್ಧರಿಸುತ್ತೇನೆ ಎಂದರು.
ಇನ್ನು ಬಿಜೆಪಿ ಸೇರ್ಪಡೆಯಾಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ ಜತೆ ಒಂದಾಗಲು ಹೇಗೆ ಸಾಧ್ಯ? ಬಿಜೆಪಿ ಕೇಶವ ಕೃಪ, ನಾನು ಬಸವ ಕೃಪ. ಕಾದುನೋಡಿ ಕಾಲಾಯ ತಸ್ಮೈ ನಮಃ ಎಂದು ಹೇಳಿದರು.