ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಯೋಧರ ಸ್ಮಾರಕವಾದ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮೂವರು ಸೇನಾ ಮುಖ್ಯಸ್ಥರು ಸಮಾರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಮೋದಿಗೆ ಸಾಥ್ ನೀಡಿದರು.
ಗಣರಾಜ್ಯೋತ್ಸವ ಕಾರ್ಯಕ್ರಮಗಳು ಯುದ್ಧ ಸ್ಮಾರಕದಲ್ಲಿ ಗೌರವಾರ್ಪಣೆ ಸಮಾರಂಭದೊಂದಿಗೆ ಪ್ರಾರಂಭವಾಗುತ್ತದೆ. ಕೊರೆಯುವ ಚಳಿಯ ನಡುವೆಯೂ ದೆಹಲಿಯ ರಾಜಫಥದಲ್ಲಿ ಗಣರಾಜ್ಯೋತ್ಸವದ ಪರೇಡ್ ವೀಕ್ಷಿಸಲು ಸಾಕಷ್ಟು ಜನರು ಆಗಮಿಸಿದ್ದರು.
ಆದರೂ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಜನದಟ್ಟಣೆ ತುಂಬಾನೇ ಕಡಿಮೆ ಇತ್ತು. ಬಹುಶಃ ಓಮಿಕ್ರಾನ್ ರೂಪಾಂತರಿಯ ಭಯ ಈ ಬಾರಿ ಗಣರಾಜ್ಯೋತ್ಸವದ ಆಚರಣೆಯನ್ನು ಕೊಂಚ ತಟಸ್ಥಗೊಳಿಸಿದೆ. ಕಳೆದ ವರ್ಷ ಕೂಡ ಕೊರೊನಾ ಕಾರಣದಿಂದಾಗಿ ಗಣರಾಜ್ಯೋತ್ಸವ ಸರಳವಾಗಿ ಆಚರಿಸಲ್ಪಟ್ಟಿತ್ತು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆಸನಗಳ ವ್ಯವಸ್ಥೆ ಮಾಡಲಾಗಿತ್ತಾದರೂ ಸಂದರ್ಶಕರೆಂದು ಮೀಸಲಿಟ್ಟಿದ್ದ ಬಹುತೇಕ ಆಸನಗಳು ಭರ್ತಿಯಾಗಿದ್ದು ಕಂಡು ಬಂತು.
73ನೇ ಗಣರಾಜ್ಯೋತ್ಸದ ಅಂಗವಾಗಿ ದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ 16 ಕವಾಯತು ತಂಡಗಳು, 17 ಮಿಲಿಟರಿ ಬ್ಯಾಂಡ್ಗಳು ಹಾಗೂ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು, ಇಲಾಖೆಗಳು ಮತ್ತು ಸಶಸ್ತ್ರ ಪಡೆಗಳ 25 ಟೇಬಲ್ಲಾಕ್ಸ್ಗಳನ್ನು ಒಳಗೊಂಡಿತ್ತು.
ಭಾರತದ ಸೇನಾ ಶಕ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲಾಯಿತು. ಈ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ಕೇಂದ್ರದ ಆಜಾದಿ ಕಾ ಅಮೃತ್ ಮಹೋತ್ಸವದ ಒಂದು ಭಾಗವಾಗಿದೆ. 75 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಒಳಗೊಂಡಿರುವ ಅತಿದೊಡ್ಡ ಫ್ಲೈಪಾಸ್ಟ್‌ಗೆ ಇಡೀ ದೇಶವೇ ಸಾಕ್ಷಿಯಾಯಿತು. ಕೋವಿಡ್ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಎರಡೂ ಡೋಸ್‌ಗಳ ಲಸಿಕೆಯನ್ನು ಹೊಂದಿರದ ಜನರನ್ನು ಈ ವರ್ಷ ಗಣರಾಜ್ಯೋತ್ಸವ ಪರೇಡ್‌ಗೆ ಹಾಜರಾಗದಂತೆ ನಿರ್ಬಂಧಿಸಿದ್ದಾರೆ.