ನವದೆಹಲಿ : ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಅವರು ಪ್ರಶಸ್ತಿಯನ್ನು ಹಿಂದಿರುಗಿಸಿದ್ದು, ಕಿರಿಯ ಕಲಾವಿದರಿಗೆ ಪ್ರೋತ್ಸಾಹಿಸುವಂತೆ ಸಲಹೆ ನೀಡಿದ್ದಾರೆ.
ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಅವರು ಕೂಡ ಈ ಪ್ರಶಸ್ತಿ ತಿರಸ್ಕರಿಸಿದ್ದರು. ಇದರ ಬೆನ್ನಲ್ಲಿಯೇ ಹಿರಿಯ ಕಲಾವಿದೆ ಕೂಡ ತಿರಸ್ಕರಿಸಿದ್ದಾರೆ.
ಅಲ್ಲದೇ, ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಅವರು ಇಂತಹ ಪ್ರಶಸ್ತಿಗಳನ್ನು ಕಿರಿಯ ಕಲಾವಿದರಿಗೆ ನೀಡಿ ಗೌರವಿಸಬೇಕು. ಆಗ ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಈ ವಯಸ್ಸಿನಲ್ಲಿ ನಮಗೆ ಈ ಪ್ರಶಸ್ತಿಯ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಸಂಧ್ಯಾ ಮುಖರ್ಜಿಯವರು ಹಲವಾರು ವರ್ಷಗಳಿಂದ ಸಂಗೀತ ಲೋಕದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಪ್ರಶಸ್ತಿಗಳನ್ನು ಕೂಡ ಅವರು ಈ ಹಿಂದೆ ಸ್ವೀಕರಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಆದರೆ, ಪದ್ಮಶ್ರೀ ಪ್ರಶಸ್ತಿಯನ್ನು ಮಾತ್ರ ತಿರಸ್ಕರಿಸಿದ್ದಾರೆ. ಈ ಹಿಂದೆ ಹಲವಾರು ಸಾಹಿತಿಗಳು ಹಾಗೂ ಕಲಾವಿದರು ಕೂಡ ಪ್ರತಿಷ್ಠಿತ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.