ಬಾದಾಮಿ: ಕಾಂಗ್ರೆಸ್ ನ 16 ಮಂದಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಮ್ಮ ಪಕ್ಷದಿಂದ ಯಾರೂ ಕೂಡ ಬಿಜೆಪಿಗೆ ಹೋಗಲ್ಲ, ರಾತ್ರಿ ಕಂಡ ಬಾವಿಗೆ ಯಾರಾದರೂ ಹಗಲು ಬೀಳ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಬಹಳ ವರ್ಷಗಳಿಂದ ಹೇಳ್ತಿದ್ದಾರೆ. ಅವರ ಮಾತಿಗೆ ಯಾರೂ ಕಿಮ್ಮತ್ತು ಕೊಡಬೇಕಿಲ್ಲ ಎಂದು ಹೇಳಿದರು.
ನನಗೆ ಗೊತ್ತಿರುವ ಮಟ್ಟಿಗೆ ಯಾರೂ ಕೂಡ ಬಿಜೆಪಿಗೆ ಹೋಗಲ್ಲ. ಬಿಜೆಪಿ ಈಗ ಮುಳುಗುತ್ತಿರುವ ಹಡಗು. ರಾತ್ರಿ ನೋಡಿದ ಬಾವಿಗೆ ಹಗಲು ಹೊತ್ತು ಬೀಳ್ತಾರಾ? ಜಾರಕಿಹೊಳಿ ಹೇಳಿಕೆಗೆ ಉತ್ತರಿಸಬೇಕಿಲ್ಲ ಎಂದರು.