ಶಿವಮೊಗ್ಗ: ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಬೀಟ್ ವ್ಯವಸ್ಥೆ ಬಲಪಡಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಾನುವಾರು ಸಾಗಾಣಿಕೆ ಬಹಳಷ್ಟು ನಿಂತಿದೆ. ಗಾಂಜಾ ಮತ್ತು ಡ್ರಗ್ಸ್ ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಭದ್ರಾವತಿ ಮತ್ತು ತುಂಗಾ ನಗರ ಠಾಣೆಗಳ ವ್ಯಾಪ್ತಿಯಲ್ಲಿ ಅಧಿಕ ಪ್ರಮಾಣದಲ್ಲಿ ಗಾಂಜಾ ವಶಪಡಿಸಿಕೊಳ್ಳುವುದರ ಜೊತೆಗೆ ಗಾಂಜಾ ಸೇವನೆ ಮಾಡುವವರನ್ನು ಕೂಡ ಜೈಲಿಗೆ ಕಳಿಸಿದ್ದು, ಗಾಂಜಾ ಸೇವನೆ ಪ್ರಮಾಣ ಕಡಿಮೆಯಾಗಿದೆ ಎಂದರು.
ಮರಳು, ಕಲ್ಲು ಮತ್ತು ರಿಯಲ್ ಎಸ್ಟೇಟ್ ಮಾಫಿಯಾದೊಂದಿಗೆ ಕೈ ಜೋಡಿಸುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಇನ್ನು ಬಡ್ಡಿ ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಲ, ಬಡ್ಡಿ ವಸೂಲಾತಿಗೆ ಹಿಂಸೆ ನೀಡಿದಲ್ಲಿ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಒಟ್ಟಾರೆಯಾಗಿ ಬೇರೆ ಜಿಲ್ಲೆಗಳಿಗೆ ಹೋಲಿಸಿದಾಗ, ನಮ್ಮ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆ ಮತ್ತು ನಿಯಂತ್ರಣ ಕ್ರಮಗಳು ಸಮಾಧಾನಕರವಾಗಿದೆ ಎಂದರು.
ಜಿಲ್ಲೆಯಲ್ಲಿ 105 ಕಾನ್ ಸ್ಟೇಬಲ್ ಹುದ್ದೆ, 32 ಸಬ್ ಇನ್ಸ್ ಪೆಕ್ಟರ್ ಹುದ್ದೆ ಖಾಲಿ ಇದೆ. 545 ಸಬ್ ಇನ್ಸ್ ಪೆಕ್ಟರ್ ಗಳು ಪರೀಕ್ಷೆಯಲ್ಲಿ ಪಾಸಾಗಿ ತರಬೇತಿ ಪಡೆಯುತ್ತಿದ್ದಾರೆ. 4 ಸಾವಿರ ಕಾನ್ ಸ್ಟೇಬಲ್ ಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, 8 ತಿಂಗಳ ತರಬೇತಿ ನಂತರ ಇಲಾಖೆಗೆ ಸೇರಲಿದ್ದಾರೆ ಎಂದು ತಿಳಿಸಿದರು.
ಸಬ್ ಇನ್ಸ್ ಪೆಕ್ಟರ್ ಹುದ್ದೆ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ನಿರಾಧಾರ. ಯಾರಿಗಾದರೂ ಸಂಶಯವಿದ್ದರೆ ಅಂತಹ ಅಭ್ಯರ್ಥಿಗಳು ಸೂಕ್ತ ಫೀಸ್ ಕಟ್ಟಿ ಎಕ್ಸಾಂ ಶೀಟ್ ನಕಲನ್ನು ಪಡೆದು ಅಪೀಲ್ ಮಾಡಬಹುದು. ಕಲಬುರಗಿಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದವರನ್ನು ಜೈಲಿಗೆ ಕಳಿಸಲಾಗಿದೆ. ಒಂದು ಲಕ್ಷ ಅಭ್ಯರ್ಥಿಗಳು ಪಿಎಸ್ಐ ಪರೀಕ್ಷೆ ಬರೆದರು. ಆದರೆ ಆಯ್ಕೆಯಾಗಿದ್ದು ಕೇವಲ 450 ಮಾತ್ರ. ಆದ್ದರಿಂದ ಉಳಿದವರಿಗೆ ಅಸಹನೆ ಇರುವುದು ಸಹಜ. ಆದರೂ ಅನ್ಯಾಯವಾಗಿದ್ದರೆ ದೂರು ನೀಡಿದ್ದಲ್ಲಿ ವಿಚಾರಣೆ ಮಾಡಿ ನ್ಯಾಯ ಕೊಡಿಸಲಾಗುವುದು ಎಂದರು.