ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ, ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಅಸಮಾಧಾನದ ಬೆನ್ನಲ್ಲೇ ಖಡಕ್ ಎಚ್ಚರಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿಯಲ್ಲಿ ಶಿಸ್ತು ಉಲ್ಲಂಘನೆಯಾದರೆ ಸಹಿಸಲ್ಲ, ಯಾರೂ ಬಹಿರಂಗ ಹೇಳಿಕೆ ನಿಡುವಂತಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ನಾವು ಯಾರ ಒತ್ತಡಕ್ಕು ಮಣಿಯುವ ಪ್ರಶ್ನೆಯೇ ಇಲ್ಲ. ಸರ್ಕಾರ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾರೂ ಮಾತನಾಡಬಾರದು. ಬಿಜೆಪಿಯಲ್ಲಿ ಎಲ್ಲರೂ ಶಿಸ್ತು ಪಾಲಿಸಬೇಕು. ಸಿಎಂ, ಅಧ್ಯಕ್ಷರು, ಶಾಸಕರು ಎಂದು ಬೇರೆ ಬೇರೆ ಶಿಸ್ತು ಅಂತ ಇಲ್ಲ. ಶಿಸ್ತು ಉಲ್ಲಂಘನೆಯಾದರೆ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಯಾರೇ ಆಗಲಿ ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು. ಬಹಿರಂಗವಾಗಿ ಹೇಳಿಕೆ ನೀಡುವವರ ಜತೆ ಮಾತನಾಡುತ್ತೇನೆ. ಶಿಸ್ತು ಸಮಿತಿ ಮೂಲಕ ಕೇಂದ್ರಕ್ಕೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಜಿಲ್ಲೆಯಲ್ಲಿ ಅದೇ ಜಿಲ್ಲೆಯವರು ಇರುವುದಿಲ್ಲ. ಇದು ನಮ್ಮ ಪಕ್ಷದ ನಿಯಮ. ಅದನ್ನೇ ರಾಜ್ಯದಲ್ಲಿಯೂ ಅನುಷ್ಠಾನ ಮಾಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ, ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ನಳೀನ್ ಕಟೀಲ್, ಬಿಜೆಪಿಯ ಯಾವ ನಾಯಕರೂ ಕಾಂಗ್ರೆಸ್ ಸಂಪರ್ಕದಲ್ಲಿಲ್ಲ. ಕಾಂಗ್ರೆಸ್ ನವರು ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಇತರ ಪಕ್ಷದ ನಾಯಕರೇ ನಮ್ಮ ಸಂಪರ್ಕದಲ್ಲಿದ್ದಾರೆ. ಬಿ.ಎಸ್.ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ಆಡಳಿತ ನೋಡಿ ಬಿಜೆಪಿಗೆ ಬರಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.