ಆಮ್ ಆದ್ಮಿ ಪಕ್ಷದ (ಎಎಪಿ) ಸಿಎಂ ಅಭ್ಯರ್ಥಿಯ ಸಮೀಕ್ಷೆಯನ್ನು ಪ್ರಶ್ನಿಸಿರುವ ಪಂಜಾಬ್ ನ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿದ್ದು ಅರವಿಂದ್ ಕೇಜ್ರಿವಾಲ್ ಅವ್ರನ್ನ ತರಾಟೆಗೆ ತೆಗೆದುಕೊಡಿದ್ದಾರೆ. ಸಮೀಕ್ಷೆಯನ್ನು ಹಗರಣ ಎಂದು ಕರೆದಿರುವ ಸಿದ್ದು, ಎಎಪಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದೆ ಎಂದಿದ್ದಾರೆ.
ಫೆಬ್ರವರಿ 20 ರ ಪಂಜಾಬ್ ಚುನಾವಣೆಗೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಆಮ್ ಆದ್ಮಿ ಪಾರ್ಟಿ ಫೋನ್ ಲೈನ್ ಸಮೀಕ್ಷೆಯನ್ನು ನಡೆಸಿತು. ಸಮೀಕ್ಷೆಯ ಆಧಾರದ ಮೇಲೆ, ಆಪ್ ತನ್ನ ಮುಖ್ಯಮಂತ್ರಿ ಮುಖವಾಗಿ ಸಂಗ್ರೂರ್ ಸಂಸದ ಭಗವಂತ್ ಮಾನ್ ಅವರನ್ನು ಆಯ್ಕೆ ಮಾಡಿದೆ.
ಪಂಜಾಬ್ ರಾಜ್ಯಕ್ಕೆ ಸಿಎಂ ಅಭ್ಯರ್ಥಿಯನ್ನ ಜನರೆ ನಿರ್ಧರಿಸಿ ಎಂದು ಸಮೀಕ್ಷೆ ನಡೆಸಿದ್ವಿ. ನಮ್ಮ ಫೋನ್‌ಲೈನ್ ಸಮೀಕ್ಷಗೆ 21,59,437 ಪ್ರತಿಕ್ರಿಯೆಗಳು ಬಂದಿವೆ ಎಂದು ಎಎಪಿ ಹೇಳಿಕೊಂಡಿದೆ. ಈ ಸಮೀಕ್ಷೆಯನ್ನು ಸ್ಕ್ಯಾಮ್ ಎಂದಿರುವ ನವಜೋತ್ ಸಿಂಗ್, ಸಮೀಕ್ಷೆಗೆ ಬಳಸಲಾದ ಮೊಬೈಲ್ ಸಂಖ್ಯೆ ಸಾಮಾನ್ಯ ಸಂಖ್ಯೆಯೇ ಹೊರತು ವಾಣಿಜ್ಯವಲ್ಲ ಎಂದು ಪ್ರತಿಪಾದಿಸಿದ್ದಾರೆ. ಸಾಮಾನ್ಯ ಮೊಬೈಲ್ ಸಂಖ್ಯೆಯು ನಾಲ್ಕು ದಿನಗಳಲ್ಲಿ 21 ಲಕ್ಷ ಕರೆಗಳು, ಎಸ್‌ಎಂಎಸ್ ಗಳನ್ನು ರೆಕಾರ್ಡ್ ಮಾಡಲು ಸಾಧ್ಯವಿಲ್ಲ. ಎಎಪಿ ಏಳು ಲಕ್ಷ ವಾಟ್ಸಾಪ್ ಸಂದೇಶಗಳನ್ನು ಸ್ವೀಕರಿಸಿದೆ ಎಂದು ಹೇಳಿಕೊಂಡಿದೆ. ಕೇವಲ ನಾಲ್ಕು ದಿನದಲ್ಲಿ ಸಾಮಾನ್ಯ ಸಂಖ್ಯೆ ಇಷ್ಟೆಲ್ಲಾ ಮಾಹಿತಿ ಕಲೆಹಾಕಲು ಸಾಧ್ಯವ, ಆಮ್ ಆದ್ಮಿ ಪಕ್ಷ ಪಂಜಾಬ್ ಜನರನ್ನು ಮರುಳು ಮಾಡಲು ಪ್ರಯತ್ನಿಸುತ್ತಿದೆ. ಅದರ ಬೂಟಾಟಿಕೆಯನ್ನು ನಾನು ಬಹಿರಂಗಪಡಿಸುತ್ತೇನೆ ಎಂದು ಸಿದ್ದು ಗುಡುಗಿದ್ದಾರೆ.
ಇದೆ ವೇಳೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದು, ದೆಹಲಿ ಸಿಎಂ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಗಣಿತಜ್ಞೆ ಶಕುಂತಲಾ ದೇವಿ ಅವರ ಚಿಕ್ಕಪ್ಪನಾಗಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ. 21ಲಕ್ಷ ಸಂದೇಶಗಳನ್ನ ಓದಲು ಸುಮಾರು 5,000-7,000 ಜನರು ಬೇಕು, ಇದು ಅಸಾಧ್ಯ ಎಂದಿರುವ ಅವರು, ಕೇಜ್ರಿವಾಲ್ ಭ್ರಮೆಯನ್ನು ಪ್ರಚಾರ ಮಾಡುತ್ತಿದ್ದಾರೆ. ನಕಲಿ ಸಮೀಕ್ಷೆ ನಡೆಸುವ ಮೂಲಕ ಎಎಪಿ ಎಂಸಿಸಿಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ, ಆಮ್ ಆದ್ಮಿ ಪಾರ್ಟಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದ ಸಿದ್ದು, ಕೇಜ್ರಿವಾಲ್ ಅವರು ಈ ಬಾರಿ ನಿಧಿ ಸಂಗ್ರಹಿಸಲು ವಿದೇಶಕ್ಕೆ ಏಕೆ ಹೋಗಲಿಲ್ಲ ಎಂದಿದ್ದಾರೆ.