ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಬದಲಾವಣೆಯಿಂದ ಬೇಸರವೇನೂ ಇಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಬದಲಿಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಚಿಕ್ಕಮಗಳೂರಿನಲ್ಲಿ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಗೆ ಅವಕಾಶ ಸಿಕ್ಕಿದೆ. ಶೃಂಗೇರಿಯಲ್ಲಿ ಬಿಜೆಪಿ ಗೆದ್ದಿಲ್ಲ. ಅಲ್ಲಿ ಪಕ್ಷ ಬಲಪಡಿಸುತ್ತೇವೆ. ಯಾವ ಜಿಲ್ಲೆಗೆ ಹೋದರೂ ರಾಜ್ಯವನ್ನು ಅಭಿವೃದ್ಧಿ ಮಾಡಬಹುದು. ಕನ್ನಡಮ್ಮನ ತೇರು ಎಳೆಯಲು ಯಾವ ಜಿಲ್ಲೆಯಾದರೇನು? ರಾಜ್ಯದ ಯಾವ ಜಿಲ್ಲೆಗೆ ಹೋದರೂ ಅಭಿವೃದ್ಧಿ ಸಾಧ್ಯವಿದೆ. ಶಿವಮೊಗ್ಗದಲ್ಲಿ ನೂತನ ಉಸ್ತುವಾರಿ ನಾರಾಯಣಗೌಡರು ಅಭಿವೃದ್ಧಿ ಮಾಡುತ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಸಚಿವ ಸಂಪುಟ ಪುನಾರಚನೆಗೂ, ಉಸ್ತುವಾರಿ ಸಚಿವರನ್ನು ನಿಯೋಜಿಸಿರುವುದಕ್ಕೂ ಸಂಬಂಧವಿಲ್ಲವೆಂದ ಅವರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿರುವುದು ಸಿಎಂ ಪರಮಾಧಿಕಾರವಾಗಿದೆ. ಬದಲಾವಣೆಯ ಬಗ್ಗೆ ಅವರು ಕರೆ ಮಾಡಿ ತಿಳಿಸಿದ್ದರು. ಉಸ್ತುವಾರಿ ನೀಡಿದ್ದಕ್ಕೆ ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ. ಇಡೀ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸುತ್ತೇವೆ ಎಂದು ತಿಳಿಸಿದ್ದಾರೆ.