ಮಲೆಯಾಳಂ ನಟಿಯ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ವಿರುದ್ಧ ವಿಚಾರಣೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಕೋರಿ, ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ವಿಚಾರಣೆಯ ಅವಧಿಯನ್ನು ಇನ್ನೂ ಆರು ತಿಂಗಳು ವಿಸ್ತರಿಸುವಂತೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಪ್ರಸ್ತುತ ವಿಚಾರಣೆ ಮುಗಿಸಲು ಫೆಬ್ರವರಿ 16, 2022ರವರೆಗು ಗಡುವಿದೆ.
2017 ರಲ್ಲಿ ಕೊಚ್ಚಿಯಲ್ಲಿ ನಟಿಯನ್ನು ಅಪಹರಿಸಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟ ದಿಲೀಪ್, ನಟಿಯ ಮೇಲೆ ಹಲ್ಲೆ ಮಾಡಲು ಆರೋಪಿ ಸುನಿಗೆ ಗುತ್ತಿಗೆ ನೀಡಿದ್ದರು ಎಂದು ಆರೋಪಿಸಲಾಗಿದೆ. ನಟ ದಿಲೀಪ್ ಈ ಪ್ರಕರಣದ ಎಂಟನೇ ಆರೋಪಿ.
2019 ರ ನವೆಂಬರ್ ತಿಂಗಳಲ್ಲಿ, ಇನ್ನು ಆರು ತಿಂಗಳುಗಳ ಒಳಗೆ ಪ್ರಕರಣದ ವಿಚಾರಣೆಯನ್ನು ಮುಗಿಸುವಂತೆ ಸುಪ್ರೀಂ ಕೋರ್ಟ್ ಕೇರಳದ ನ್ಯಾಯಾಲಯವನ್ನು ಕೇಳಿಕೊಂಡಿತ್ತು. ಕೋವಿಡ್ ಲಾಕ್ ಡೌನ್ ಮತ್ತು ವಿಚಾರಣಾ ನ್ಯಾಯಾಲಯದ ಕೋರಿಕೆಯ ಮೇರೆಗೆ ಇಲ್ಲಿಯವರೆಗು ಸಮಯವನ್ನು ವಿಸ್ತರಿಸಲಾಗಿದೆ. ರಾಜ್ಯದ ಕೋರಿಕೆಯ ಮೇರೆಗೆ ಮತ್ತಷ್ಟು ಕಾಲಾವಕಾಶವನ್ನು ವಿಸ್ತರಿಸುವುದಿಲ್ಲ. ವಿಚಾರಣಾ ನ್ಯಾಯಾಧೀಶರು ವಿಸ್ತರಣೆಯನ್ನು ಕೋರಿದರೆ ಮಾತ್ರ ವಿಸ್ತರಣೆಯನ್ನು ನೀಡಬಹುದು ಎಂದು ಎಸ್‌ಸಿ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ವಿಚಾರಣೆಗೆ ಆಗ್ರಹಿಸಿ ದಿಲೀಪ್ ಈ ಹಿಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದುವರೆಗೆ 202 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ತನಿಖೆ ಹೆಸರಲ್ಲಿ ವಿಚಾರಣೆಯನ್ನ ವಿಳಂಬಗೊಳಿಸುತ್ತಿದ್ದಾರೆ, ಆದಷ್ಟು ಬೇಗ ವಿಚಾರಣೆ ಮುಗಿಸಬೇಕೆಂದು ನಟ ಸುಪ್ರೀಂ ಕೋರ್ಟ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.