ದಾವಣಗೆರೆ : ಇತ್ತೀಚೆಗೆ ಯುವ ಪೀಳಿಗೆಯಲ್ಲಿ ಸೆಲ್ಫಿ ಹಾಗೂ ಫೋಟೋಶೂಟ್ ಎಂಬುವುದು ಫ್ಯಾಶನ್ ಆಗಿ ಬಿಟ್ಟಿದೆ. ಇದರಿಂದ ಸಾಕಷ್ಟು ದುರಂತಗಳು ನಡೆದರೂ ಅವರು ಮಾತ್ರ ಬದಲಾಗುತ್ತಲೇ ಇಲ್ಲ.
ಜಿಲ್ಲೆಯಲ್ಲಿ ಇಂತಹುದೇ ದುರಂತವೊಂದು ಸಂಭವಿಸಿದ್ದು, ಯುವಕನೊಬ್ಬ ಫೋಟೋ ತೆಗೆಸಿಕೊಳ್ಳಲು ರೈಲು ಹಳಿಯ ಮೇಲೆ ನಿಂತು ಪ್ರಾಣ ಕಳೆದುಕೊಂಡಿದ್ದಾನೆ. ಹೀಗೆ ದುರಂತ ಸಾವು ಕಂಡ ಯುವಕನನ್ನು ಸಚಿನ್(16) ಎಂದು ಗುರುತಿಸಲಾಗಿದೆ.
ಈ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ರೈಲು ಹಳಿಯ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದ ಸಂದರ್ಭದಲ್ಲಿಯೇ ರೈಲು ಆಗಮಿಸಿದೆ. ಆದರೆ, ಆ ರೈಲು ಬೇರೆ ಹಳಿಯಲ್ಲಿ ಹೋಗುತ್ತದೆ ಎಂದು ಆತ ಭಾವಿಸಿದ್ದ. ಹೀಗಾಗಿ ಆತ ಫೋಟೋ ತೆಗೆಸಿಕೊಳ್ಳುವಲ್ಲಿಯೇ ಮಗ್ನನಾಗಿದ್ದ. ಆ ರೈಲು ಇದೇ ಹಳಿಯ ಮಾರ್ಗವಾಗಿಯೇ ಆಗಮಿಸಿ ಯುವಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸಚಿನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಈ ಘಟನೆ ಜಿಲ್ಲೆಯ ಡಿಸಿಎಂ ಟೌನ್ ಶಿಪ್ ಹತ್ತಿರ ನಡೆದಿದ್ದು, ಫೋಟೋಗೆ ಉತ್ತಮ ಸ್ಥಳ ಇದೇ ಎಂಬ ಕಾರಣಕ್ಕೆ ರೈಲು ಹಳಿಯ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.