ಒಂದೆಡೆ ಭಾರತೀಯ ಕ್ರಿಕೆಟ್ ನ ಹಿರಿಯರ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಸೋಲು ಕಂಡು ನಿರಾಸೆ ಮೂಡಿಸುತ್ತಿದ್ದರೆ, ಇನ್ನೊಂದೆಡೆ 19 ವರ್ಷದೊಳಗಿನವರ ಭಾರತೀಯ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ.
19 ವರ್ಷದೊಳಗಿನವರ ವಿಶ್ವಕಪ್ ನಲ್ಲಿ ಈಗ ಭಾರತೀಯ ತಂಡ ಭರ್ಜರಿ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದೆ. ಅಲ್ಲದೇ, ಕಳೆದ ಬಾರಿಯ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಇದೆ.
ಕಳೆದ ಬಾರಿಯ ಚಾಂಪಿಯನ್ ಆಗಿರುವ ಬಾಂಗ್ಲಾದೇಶದ ವಿರುದ್ಧ ಕ್ವಾರ್ಟರ್ ಫೈನಲ್ ನಲ್ಲಿ ಸೆಣಸಾಟ ನಡೆಸಲಿದೆ. ಬಿ ಗುಂಪಿನಲ್ಲಿದ್ದ ಭಾರತೀಯ ತಂಡವು ಭರ್ಜರಿ ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಭಾರತದೊಂದಿಗೆ ಕ್ವಾರ್ಟರ್ ಫೈನಲ್ ಗೆ ಆಸ್ಟ್ರೇಲಿಯಾ, ಅಪ್ಘಾನಿಸ್ತಾನ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳು ಲಗ್ಗೆಯಿಟ್ಟಿವೆ.
ಬಾಂಗ್ಲಾದೇಶದ ವಿರುದ್ಧ ಭಾರತೀಯ ತಂಡವು ಜ. 29ರಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ. ಈ ಬಾರಿಯ ವಿಶ್ವಕಪ್ ನಲ್ಲಿ ನಾಲ್ಕು ಗುಂಪುಗಳಾಗಿ ಪ್ರತಿಯೊಂದು ಗುಂಪಿನಲ್ಲಿ ತಲಾ ನಾಲ್ಕು ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಈ ಗುಂಪಿನಲ್ಲಿ ಮೊದಲೆರಡು ಸ್ಥಾನ ಗಳಿಸಿರುವ ಎರಡು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿವೆ.
ಭಾರತ ತಂಡವು ಗುಂಪು ಹಂತದಲ್ಲಿ ದಕ್ಷಿಣ ಆಫ್ರಿಕಾ, ಐರ್ಲೆಂಡ್ ಹಾಗೂ ಉಗಾಂಡ ತಂಡಗಳನ್ನು ಸೋಲಿಸಿ ಅಗ್ರ ಸ್ಥಾನದೊಂದಿಗೆ ಫೈನಲ್ ಪ್ರವೇಶ ಮಾಡಿದೆ. ಭಾರತೀಯ ಕಿರಿಯರ ತಂಡದಲ್ಲಿ ಐವರು ಆಟಗಾರರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದರ ಮಧ್ಯೆಯೇ ಭಾರತೀಯ ಕಿರಿಯರ ತಂಡ ಭರ್ಜರಿ ಪ್ರದರ್ಶನ ತೋರಿಸುತ್ತಿದೆ.