ಕ್ರಿಶ್ಚಿಯನ್ ಧರ್ಮಕ್ಕೆ ಮತಾತಂರಗೊಳ್ಳುವಂತೆ ಒತ್ತಾಯಿಸಿದರು ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯ ಶವವನ್ನ ಸ್ವೀಕರಿಸಿ ಅಂತಿಮ ಕಾರ್ಯಗಳನ್ನು ನೆರವೇರಿಸಿ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ಆಕೆಯ ಪೋಷಕರಿಗೆ ಸೂಚಿಸಿದೆ.
ಮೃತ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು, ಮಗಳ ಸಾವಿಗೆ ನ್ಯಾಯ ಸಿಗವವರೆಗು ಆಕೆಯ ಶವವನ್ನು ತೆಗೆದುಕೊಳ್ಳುವುದಿಲ್ಲ ಎಂದು ಒತ್ತಾಯಿಸಿದ್ದರು. ತನ್ನ ಮಗಳ ಸಾವಿಗೆ ಕಾರಣವಾಗಿರುವ ಮಿಷನರಿ ಶಾಲೆ ಹಾಗೂ ಹಾಸ್ಟೆಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಪ್ರಕರಣವನ್ನು ಸಿಬಿಸಿಐಡಿಗೆ ವರ್ಗಾಯಿಸಲು ಆದೇಶ ನೀಡುವಂತೆ ಕೋರಿ ವಿದ್ಯಾರ್ಥಿಯ ತಂದೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಶಾಖೆಯಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದ ತನಿಖೆ ನಡೆಸುವಂತೆ ತಿರುಕಟ್ಟುಪಲ್ಲಿ ಪೊಲೀಸರಿಗೆ ಸೂಚಿಸಿದರು. ಅದಾದಮೇಲೆ ಬಾಲಕಿಯ ಪೋಷಕರು ಮರು ಮೇಲ್ಮನವಿ ಸಲ್ಲಿಸಿದರು, ನಂತರ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್ ಅವರು ಶನಿವಾರ ಅರ್ಜಿಯನ್ನು ತುರ್ತು ವಿಷಯವಾಗಿ ಕೈಗೆತ್ತಿಕೊಂಡರು.
ಈ ಸಂದರ್ಭದಲ್ಲಿ, ಶವವನ್ನು ಸ್ವೀಕರಿಸಿ ಅಂತ್ಯಸಂಸ್ಕಾರ ಮಾಡಬೇಕೆಂದು, ಮೃತ ವಿದ್ಯಾರ್ಥಿನಿಯ ಪೋಷಕರನ್ನ ನ್ಯಾಯಾಲಯ ಕೇಳಿಕೊಂಡಿದೆ. ತಂಜಾವೂರು ವೈದ್ಯಕೀಯ ಕಾಲೇಜಿನ ಫೋರೆನ್ಸಿಕ್ ವೈದ್ಯರು ಈಗಾಗಲೇ ವಿದ್ಯಾರ್ಥಿನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಲೈಂಗಿಕ ಕಿರುಕುಳದ ಶಂಕೆ ಇಲ್ಲ. ಆದ್ದರಿಂದ ಮರು ಪರೀಕ್ಷೆಯ ಅಗತ್ಯವಿಲ್ಲ.ಹೀಗಾಗಿ ಮೃತದೇಹವನ್ನು ವಾಪಸ್ ಪಡೆದು, ಅಂತಿಮ ಕಾರ್ಯ ನೆರವೇರಿಸಿ ಎಂದು ನ್ಯಾಯಾಲಯ ಪೋಷಕರಿಗೆ ಮನವಿ ಮಾಡಿದೆ.
ಅಲ್ಲದೆ ವಿದ್ಯಾರ್ಥಿನಿಯ ಮೃತದೇಹವನ್ನು ಸ್ವಗ್ರಾಮಕ್ಕೆ ಸಾಗಿಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ. ವಿದ್ಯಾರ್ಥಿನಿಯ ಅಂತ್ಯಕಾರ್ಯದಲ್ಲಿ ಪೊಲೀಸರು ಮಧ್ಯಪ್ರವೇಶಿಸಬೇಡಿ ಎಂದು ಆದೇಶಿಸಿರುವ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.