ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದಿಂದ ಜನ ಓಡಿಸಿದ್ದಾರೆ, ಈ ಸಲ ಬಾದಾಮಿಯಿಂದಲೂ ಓಡಬೇಕಾಗುತ್ತದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ, ಜನರ ತೀರ್ಪಿಗೆ ತಲೆ ಬಾಗಬೇಕಾಗುತ್ತೆ. ಹೆಚ್.ಡಿ.ಕೆ.ಚುನಾವಣೆಯಲ್ಲಿ ಸೋತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆಯಲ್ಲಿ ಕುಮಾರಸ್ವಾಮಿ ಸೋತಿಲ್ವಾ? ಅವರಪ್ಪ ಸೋತಿಲ್ವಾ? ಅವರಣ್ಣ ಸೋತಿದ್ದಾರೆ… ಮಗನೂ ಸೋತಿದ್ದಾರೆ… ಪ್ರಜಾಪ್ರಭುತ್ವದಲ್ಲಿ ಜನ ನೀಡುವ ತೀರ್ಪೇ ಅಂತಿಮ. ಗುರುಸ್ವಾಮಿ ಎದುರು ನಾನು ಸೋತಾಗ ಇವರು ಎಲ್ಲಿದ್ದರು? ನಾನು ಅಧ್ಯಕ್ಷನಾದಾಗ ಹೆಚ್.ಡಿ.ಕೆ.ಎಲ್ಲಿದ್ದರು ಎಂತಲೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಾನೇಕೆ ಇವರ ಮುಂದೆ ಹೋಗಿ ಕೈಕಟ್ಟಲಿ. ನಾನೇಕೆ ಅಳಲಿ? ರಾಜ್ಯದ ಜನರ ಮುಂದೆ ಅತ್ತುಕೊಂಡು ತಿರುಗುವವರು ಯಾರು? ಕಣ್ಣೀರು ಹಾಕುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.