ಬೆಂಗಳೂರು: ಸಚಿವ ಮುರುಗೇಶ್ ನಿರಾಣಿ ವಿರುದ್ಧ ಕೆಂಡ ಕಾರಿರುವ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸ್ವಾರ್ಥಕ್ಕಾಗಿ ಮಠವನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಮೂರನೇ ಪೀಠಕ್ಕೆ ಸಚಿವ ನಿರಾಣಿ ಬೆಂಬಲ ನೀಡುವುದಾಗಿ ಹೇಳಿರುವುದು ಬೇಸರ ತಂದಿದೆ. ಸಮಾಜ ಒಗ್ಗೂಡಿಸಲು ಪಂಚಮಸಾಲಿ ಪೀಠ ಕಟ್ಟಲಾಗಿದೆ ಹೊರತು ಸ್ವಾರ್ಥಕ್ಕಾಗಿ ಪೀಠ ಬಳಸಿಕೊಳ್ಳಲು ಅಲ್ಲ. ನಿರಾಣಿಯವರು ಬೇಕಾದರೆ ಗ್ರಾಮಕ್ಕೊಂದು, ಮನೆಗೊಂದು ಪೀಠ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಸಿಎಂ ಸ್ಥಾನದ ಆಸೆಗಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ನಾವು ಹೋರಾಟ ನಡೆಸಿದ್ದೇವೆ. ನಮ್ಮ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ. ಆದರೆ ಸಚಿವ ನಿರಾಣಿಯವರು ತಮ್ಮ ಸ್ವಾರ್ಥಕ್ಕಾಗಿ ಈಗ ಮೂರನೇ ಪೀಠ ಮಾಡಲು ಹೊರಟಿದ್ದಾರೆ. ಸಮಾಜದಲ್ಲಿ ಸುಮ್ಮನೆ ಗೊಂದಲ ಸೃಷ್ಟಿಸುವುದು ಬೇಡ. ಸಮಾಜ ಒಗ್ಗೂಡಿಸಲೆಂದು ಪೀಠ ಕಟ್ಟಿದ್ದು, ಆದರೆ ಸಚಿವರು ತಮ್ಮ ವೈಯಕ್ತಿಕ ಕೆಲಸಕ್ಕೆ ಪೀಠ ಬಳಸಿಕೊಳ್ಳಲು ಹೊರಟಿದ್ದಾರೆ. ಸಿಎಂ, ಮಂತ್ರಿ ಸ್ಥಾನಕ್ಕಿಂತ ನಮಗೆ ಸಮುದಾಯದ ಹಿತ ಮುಖ್ಯ. ಸಮಾಜ ಒಡೆಯುವ ಕೆಲಸಕ್ಕೆ ಕೈಹಾಕಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.