ಬೆಳಗಾವಿ: ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯಿಂದ ಮಂಜೂರಾಗಿದ್ದ ಅನುದಾನ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಮುಜರಾಯಿ ಇಲಾಖೆ ತಹಶೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮುಜರಾಯಿ ಇಲಾಖೆ ತಹಶೀಲ್ದಾರ್ ದಶರಥ ನಕುಲ ಜಾಧವ ಹಾಗೂ ಆತನ ಸಂಬಂಧಿ ಸಂತೋಷ ಕಡೋಲಕರ ಬಂಧಿತರು.
ರಾಮದುರ್ಗದ ಯಕಲಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯಿಂದ 4 ಲಕ್ಷ ರೂಪಾಯಿ ಮಂಜೂರಾಗಿತ್ತು. ಹಣ ಬಿಡುಗಡೆಗೆ ತಹಶೀಲ್ದಾರ್ ದಶರಥ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ದೇವಸ್ಥಾನ ಆಡಳಿತ ಮಂಡಳಿಯ ಸುಭಾಷ್ ಗೋಡಕೆ ಎಂಬುವವರು ಎಸಿಬಿಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸಿಬಿ ಎಸ್ ಪಿ ನೇಮಗೌಡ, ಡಿ ವೈ ಎಸ್ ಪಿ ಕರುಣಾಕರ ಶೆಟ್ಟಿ ನೇತೃತ್ವದ ತಂಡ ತಹಶೀಲ್ದಾರ್ ಮೇಲೆ ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಲಂಚ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ತಹಶೀಲ್ದಾರ್ ದಶರಥ ಹಾಗೂ ಆತನ ಸಂಬಂಧಿ ಸಂತೋಷ್ ಇಬ್ಬರನ್ನು ಬಂಧಿಸಲಾಗಿದೆ.