ಈಗಾಗಲೇ ಅಂಡರ್ -19 ವಿಶ್ವಕಪ್ ಆರಂಭವಾಗಿದ್ದು, ಭಾರತೀಯ ಕಿರಿಯರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರ ಮಧ್ಯೆ ಭಾರತ ತಂಡಕ್ಕೆ ಕೊರೊನಾ ಕಂಟಕ ಶುರುವಾಗಿದ್ದು, ಬರೋಬ್ಬರಿ ಆರು ಜನ ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಭಾರತವು ಎರಡನೇ ಪಂದ್ಯ ಆಡವುದಕ್ಕೂ ಮುನ್ನವೇ 6 ಜನ ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡಿರುವುದು ದೃಢ ಪಟ್ಟಿದೆ. ಹೀಗಾಗಿ ಐರ್ಲೆಂಡ್ ವಿರುದ್ಧ ಆಡುವ 11ರ ಬಳಗ ಸೃಷ್ಟಿಸಲು ಭಾರತ ಕಷ್ಟ ಪಟ್ಟಿತ್ತು. ಆದರೂ ಈ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತು. ಒತ್ತಡದ ಮಧ್ಯೆಯೂ ಭಾರತವು ಈ ಪಂದ್ಯವನ್ನು 174 ರನ್ ಗಳ ಅಂತರದಿಂದ ಗೆದ್ದಿದೆ. ಅಲ್ಲದೇ, ಭಾರತ ತಂಡವು ಕ್ವಾರ್ಟರ್ ಫೈನಲ್ ನ್ನು ಕೂಡ ಪ್ರವೇಶಿಸಿದೆ.
17 ಜನ ಭಾರತದ ಅಂಡರ್ -19 ಆಟಗಾರರು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದರು. ಈ ಪೈಕಿ 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದಕ್ಕೆ ಇನ್ನುಳಿದಿದ್ದ 11 ಜನರು ಮಾತ್ರ ಎರಡನೇ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಇದು ತಂಡಕ್ಕೆ ದೊಡ್ಡ ತಲೆನೋವಾಗಿದ್ದು, ಹೆಚ್ಚುವರಿ ಐವರು ಆಟಗಾರರನ್ನು ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ.
ಬಿ ಗುಂಪಿನಲ್ಲಿರುವ ಭಾರತ ತಂಡವು ಮುಂದಿನ ಪಂದ್ಯವನ್ನು ಉಗಾಂಡಾ ಜೊತೆಗೆ ಆಡಲಿದೆ. ಐರ್ಲೆಂಡ್ ತಂಡದೊಂದಿಗೆ ಆಡಿದ್ದ 11 ಜನರೇ ಈ ಪಂದ್ಯದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿಯೇ ಐವರು ಆಟಗಾರರನ್ನು ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ.
ಸದ್ಯ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸಮನ್ ಅಭಿಷೇಕ್ ಪೊರೆಲ್, ರಿಷಿತ್ ರೆಡ್ಡಿ, ಉದ್ಯಮ್ ಸಹರಾನ್, ಪಿಎಂ ಸಿಂಗ್ ರಾಠೋಡ್, ಅಂಶ್ ಗೋಸಾಯಿ ವೆಸ್ಟ್ ಇಂಡೀಸ್ ಗೆ ಪ್ರಯಾಣ ಬೆಳೆಸಲಿದ್ದಾರೆ.