
ಬಾರಿಪಾಡಾ: ಒಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ವೈದ್ಯರು ಮೃತಪಟ್ಟಿದೆ ಎಂದು ಘೋಷಿಸಿದ್ದ ನವಜಾತ ಶಿಶುವಿನ ಅಂತ್ಯಕ್ರಿಯೆ ನಡೆಸುವಾಗ ಮಗುವಿಗೆ ಜೀವ ಬಂದಿದೆ.
ಜನವರಿ 19 ರಂದು ಕಾರಂಜಿಯಾ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು ಅದು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದ ಕಾರಣ ನವಜಾತ ಶಿಶು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಕಿಯೋಂಜಾರ್ ಸಹಾರಪದ ಬ್ಲಾಕ್ ನ ಖಾಡಿಕಪದ ಗ್ರಾಮದ ಸುನಿಯಾ ಮುಂಡಾ ಅವರ ಪತ್ನಿ ರೈಮಣಿ ಅವರು ಹೆರಿಗೆ ನೋವಿನಿಂದ ಬಳಲುತ್ತಿದ್ದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಶಿಶು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕುಟುಂಬದವರು ದುಃಖದಿಂದ ಶಿಶುವಿನ ಅಂತ್ಯಕ್ರಿಯೆ ನಡೆಸಲು ಮುಂದಾದಾಗ ಮಗು ಜೋರಾಗಿ ಅಳಲು ಆರಂಭಿಸಿದೆ. ಇದರಿಂದ ಗಾಬರಿಯಾದ ಕುಟುಂಬದವರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ಮಗು ಜನಿಸಿದ ಕೂಡಲೇ ಆಳದ ಕಾರಣ ಅದು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದರು. ವಾಸ್ತವದಲ್ಲಿ ಅವರು ನವಜಾತ ಶಿಶುವನ್ನು ಸರಿಯಾಗಿ ಪರೀಕ್ಷಿಸದೆ ಮೃತಪಟ್ಟಿದೆ ಎಂದು ಘೋಷಿಸಿದ್ದರು. ವೈದ್ಯರ ನಿರ್ಲಕ್ಷದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.